ಬದಿಯಡ್ಕ: ಕುಟುಂಬಶ್ರೀ ಜಿಲ್ಲಾ ಮಿಶನ್ ಕಾಸರಗೋಡು, ಬದಿಯಡ್ಕ ಗ್ರಾಮ ಪಂಚಾಯಿತಿಯ ನೇತೃತ್ವದಲ್ಲಿ ಕುಟುಂಬಶ್ರೀಯ ಸಂಗ್ರಹದಲ್ಲಿ ಬಡ ಕುಟುಂಬಕ್ಕೆ ನೀಡುವ `ಶ್ರೀಭವನ'ದ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಬದಿಯಡ್ಕ ಸಮೀಪದ ಕಿಳಿಂಗಾರು ಶ್ರೀ ಸಾಯಿ ಮಂದಿರದಲ್ಲಿ ಜರಗಿತು.
ಕೇರಳ ರಾಜ್ಯ ಸ್ಥಳೀಯಾಡಳಿತ ಇಲಾಖಾ ಸಚಿವ ಕೆ.ಎಂ. ಶಾಜಿ ಶಿಲಾನ್ಯಾಸದ ನಾಮಫಲಕವನ್ನು ಅನಾವರಣಗೊಳಿಸಿದರು. ನಂತರ ಅವರು ಮಾತನಾಡಿ, ಕುಟುಂಬಶ್ರೀಯ ಮೂಲಕ ಮಹಿಳೆಯರೂ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಿದೆ ಎಂಬುದನ್ನು ನಾವೆಲ್ಲಾ ಕಾಣಬಹುದು. ಎಲ್ಲರ ಒಗ್ಗಟ್ಟಿನ ಪರಿಶ್ರಮದಿಂದ ಬಡಮಹಿಳೆಗೆ ಮನೆ ಲಭಿಸುತ್ತಿರುವುದು ಸಂತಸ ತಂದಿದೆ. ನಾಡಿನ ದುರ್ಬಲ ಜನರನ್ನು ಹತ್ತಿರದಿಂದ ಬಲ್ಲ ಕುಟುಂಬಶ್ರೀ ಘಟಕಗಳು ಅವರನ್ನು ಮೇಲೆತ್ತುವಲ್ಲಿ ಪಣತೊಟ್ಟಿದೆ ಎಂದು ತಿಳಿಸಿದ ಅವರು ಸತ್ಯವೇ ದೇವರು ಎಂಬುದನ್ನು ಸಾಯಿರಾಂ ಭಟ್ ಕುಟುಂಬವು ತೋರಿಸಿಕೊಟ್ಟಿದೆ. ಅನೇಕ ಬಡಜನರಿಗೆ ಮನೆ ಹಾಗೂ ಇನ್ನಿತರ ಸಹಾಯವನ್ನು ನೀಡುತ್ತಾ ಮನುಷ್ಯನಾಗಿ ಜೀವಿಸುವುದು ಯಾಕೆ ಎಂಬುದಕ್ಕೆ ಈ ಕುಟುಂಬವು ಸಾಕ್ಷಿಯಾಗಿದೆ ಎಂದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಂತ ಸೂರು ಬೇಕು ಎಂಬುದು ಪ್ರತಿಯೊಬ್ಬರ ಕನಸು. ಅನೇಕ ವರ್ಷಗಳಿಂದ ಕೇವಲ ಕನಸನ್ನು ಕಾಣುತ್ತಿದ್ದ ಕುಟುಂಬಕ್ಕೆ ನಮ್ಮ ಕುಟುಂಬಶ್ರೀಯು ಆಶಾಕಿರಣವಾಗಿದೆ ಎಂದರು.
ಕಾಸರಗೋಡು ಕುಟುಂಬಶ್ರೀಯ ರತೀಶ್ ಪಿಲಿಕೋಡ್ ಯೋಜನೆಯ ಕುರಿತು ವಿವರಿಸಿದರು. ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲಾಕ್ ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು, ಸದಸ್ಯರುಗಳಾದ ಮಹೇಶ್ ವಳಕ್ಕುಂಜ, ಖಾದರ್ ಮಾನ್ಯ, ಬದಿಯಡ್ಕ ಗ್ರಾಮಪಂಚಾಯಿತಿ ಸ್ಥಾಯಿಸಮಿತಿ ಸದಸ್ಯರುಗಳಾದ ಹಮೀದ್ ಕೆಡೆಂಜಿ, ರಜನಿ ಸಂದೀಪ್, ಅವಿನಾಶ್ ರೈ, ವಿವಿಧ ವಾರ್ಡುಗಳ ಸದಸ್ಯರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಮಾಹಿನ್ ಕೆಳೋಟ್ ಸ್ವಾಗತಿಸಿ, ಸಿಡಿಎಸ್ ಅಧ್ಯಕ್ಷೆ ಸುಲೋಚನ ವಂದಿಸಿದರು. ಬದಿಯಡ್ಕ ಸಿಡಿಎಸ್ ಸದಸ್ಯರು ಪ್ರಾರ್ಥನೆ ಹಾಡಿದರು.
ಫಲಾನುಭವಿ ಶಶಿಕಲಾ ಕಾಕುಂಜೆ ಅವರ ಮನೆಕಟ್ಟುವ ಸ್ಥಳಕ್ಕೆ ಸಚಿವರು, ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಸಹಿತ ಜನಪ್ರತಿನಿಧಿಗಳು ಭೇಟಿ ನೀಡಿದರು.

.jpg)
.jpg)
