ಶಾಜಾಪುರ: ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಪಟ್ಟಣ ಮತ್ತು ನಗರಗಳಿಗೆ ತೆರಳುವ ರೈತರಿಗೆ ಸರ್ಕಾರದ ವತಿಯಿಂದ ಉಚಿತ ಹೆಲ್ಮೆಟ್ ವಿತರಣೆ ಮಾಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಮೋಹನ್ ಯಾದವ್ ಅವರು ಶಾಜಾಪುರದಲ್ಲಿ ರೈತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ವೀಕ್ಷಣೆ ಮಾಡಿದ ನಂತರ, ಅವರೊಂದಿಗೆ ಸಂವಾದ ಮಾಡಿದರು.
ಈ ವೇಳೆ ಉಚಿತ ಹೆಲ್ಮೆಟ್ ವಿತರಣೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ರಾಜ್ಯದ ಹಲವು ರೈತರು ತಮ್ಮ ಹಳ್ಳಿಗಳಿಂದ ನಗರಗಳಿಗೆ ಹಾಲು, ಹಣ್ಣು ಮತ್ತು ತರಕಾರಿಗಳನ್ನು ತೆಗೆದುಕೊಂಡು ಬಂದು ವ್ಯಾಪಾರ ಮಾಡುತ್ತಿದ್ದಾರೆ. ಆ ವೇಳೆ ಹೆಲ್ಮೆಟ್ ಧರಿಸದೆ ಬರುತ್ತಿರುವುದರಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಅದರ ಪರಿಣಾಮವನ್ನು ಕಡಿಮೆ ಮಾಡುವ ಮತ್ತು ಅವರ ಸುರಕ್ಷತೆಯ ಉದ್ದೇಶದಿಂದ ಸರ್ಕಾರವೇ ಅಂತಹ ರೈತರಿಗೆ ಉಚಿತ ಹೆಲ್ಮೆಟ್ ವಿತರಣೆ ಮಾಡಲಿದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವು ರೈತರ ಆದಾಯವನ್ನು ಹೆಚ್ಚು ಮಾಡುವ ಉದ್ದೇಶದಿಂದ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಅದಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ನಾವು ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರೈತರ ಕಷ್ಟವನ್ನು ತಪ್ಪಿಸುವ ಉದ್ದೇಶದಿಂದ ಹಗಲು ಹೊತ್ತಿನಲ್ಲೂ ವಿದ್ಯುತ್ ಸೌಲಭ್ಯ ಒದಗಿಸಲಿದ್ದೇವೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಸರ್ಕಾರವು 2026ನೇ ವರ್ಷವನ್ನು 'ಕೃಷಿಕ ಕಲ್ಯಾಣ ವರ್ಷ' ಎಂದು ಎಂದು ಘೋಷಿಸಿದ್ದು, ಅದರ ಅಡಿಯಲ್ಲಿ ರಾಜ್ಯ ಸರ್ಕಾರದ 16 ಇಲಾಖೆಗಳು ಕೃಷಿಯನ್ನು ಸಾಂಪ್ರದಾಯಿಕ ಉದ್ಯೋಗದಿಂದ ಆದಾಯದಾಯಕ ಉದ್ಯೋಗವನ್ನಾಗಿ ಮಾಡುವ ಸಂಕಲ್ಪತೊಟ್ಟಿವೆ.

