ನವದೆಹಲಿ: ನೀಟಿ ಯುಜಿ ಪರೀಕ್ಷೆ ಜೂನ್ 21ರಂದು ನಡೆಯುತ್ತಿದ್ದು, ಕಳೆದ ಬಾರಿ ಪ್ರಶ್ನೆ ಪತ್ರಿಕೆ ಗೊಂದಲ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಟ್ ಯುಜಿ ಮರುಪರೀಕ್ಷೆಯ ಸಿದ್ಧತೆಗಳ ಕುರಿತು ಸಭೆ ನಡೆಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಉನ್ನತ ಮಟ್ಟದ ಸಮಗ್ರತೆ, ಪಾರದರ್ಶಕತೆ, ದಕ್ಷತೆಯನ್ನು ಕಾಯ್ದುಕೊಳ್ಳುವುದಕ್ಕೆ ಒತ್ತು ನೀಡಬೇಕು ಎಂದು ಸೂಚನೆ ನೀಡಿದರು.
ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ. ಈ ಬಾರಿ ಎಲ್ಲಾ ರೀತಿಯ ಕಟ್ಟುನಿಟ್ಟನ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಪರೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳು ಜಾಗರೂಕರಾಗಿಬೇಕು. ಸಂಪೂರ್ಣ ರುಪರೀಕ್ಷೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು. ಎಲ್ಲಾ ಹಂತಗಳಲ್ಲಿ ಸಮನ್ವಯ ಕಾಪಾಡಿಕೊಳ್ಳಬೇಕು ಎಂದರು.
ಮರುಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಸಂಘಟಿಸಲು ಸಚಿವಾಲಯದಿಂದ ನಿಯೋಜಿಸಲಾದ ಅಧಿಕಾರಿಗಳು ಎಲ್ಲಾ ರಾಜ್ಯಗಳಿಗೆ ತಲುಪಲಿದ್ದಾರೆ ಎನ್.ಟಿ.ಎ ಮಹಾನಿರ್ದೇಶಕರ ನೇತೃತ್ವದ ಕಮಾಂಡ್ ಸೆಂಟರ್‌ಗೆ ವರದಿ ಮಾಡಲಿದ್ದಾರೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್ ಮಾತನಾಡಿ, ಪರೀಕ್ಷೆಗೆ ಮುನ್ನ ಆಸನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಕ್ರಮ ವಹಿಸಬೇಕು ಎಂದರು.
ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿನೀತ್ ಜೋಶಿ, ಈಗಿನಿಂದ ಮರುಪರೀಕ್ಷೆಯ ದಿನಾಂಕದವರೆಗಿನ ಸಮಯವು ಅತ್ಯಂತ ನಿರ್ಣಾಯಕವಾಗಿದೆ ಎಂದು. ಸಮನ್ವಯ, ಸಮಯೋಚಿತ ಸೂಚನೆಗಳ ರವಾನೆ, ನಿಗದಿತ ಎಲ್ಲಾ ಶಿಷ್ಟಾಚಾರಗಳ ಕಟ್ಟುನಿಟ್ಟಾದ ಅನುಸರಣೆಗೆ ಗಮನ ನೀಡಬೇಕು ಎಂದು ಸೂಚಿಸಿದರು.
ಎನ್.ಟಿ.ಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಮಾತನಾಡಿ, ಮರುಪರೀಕ್ಷೆಯು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳು, ರಾಜ್ಯ ಪೊಲೀಸ್ ಇಲಾಖೆಗಳು ಮತ್ತು ಗುಪ್ತಚರ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಬಂಧಪಟ್ಟ ಪಾಲುದಾರರೊಂದಿಗೆ ಎನ್.ಟಿ.ಎ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸೂಚನೆಗಳೇನು
ಪರೀಕ್ಷೆಯ ಸಿದ್ಧತೆ, ಸಮನ್ವಯ ಕಾರ್ಯವಿಧಾನಗಳು, ಭದ್ರತಾ ಶಿಷ್ಟಾಚಾರಗಳು, ಲಾಜಿಸ್ಟಿಕಲ್ ವ್ಯವಸ್ಥೆಗಳು, ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳು ಮತ್ತು ಪರೀಕ್ಷಾ ಮಾರ್ಗಸೂಚಿಗಳ ಅನುಸರಣೆಯ ಕುರಿತು ವಿವರವಾದ ಚರ್ಚೆಗಳು ನಡೆದವು.
ಮರುಪರೀಕ್ಷೆಯು ಸುಗಮವಾಗಿ, ಪಾರದರ್ಶಕವಾಗಿ ಮತ್ತು ಯಾವುದೇ ತೊಂದರೆಯಿಲ್ಲದೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪಾಲುದಾರರೊಂದಿಗೆ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಯಿತು..

