ಕಾಸರಗೋಡು: ಕೇರಳವನ್ನು ಕೇಂದ್ರವನ್ನಾಗಿಸಿ ನಡೆಸುತ್ತಿರುವ ಅಕ್ರಮ ಅವಯವ ಅವ್ಯವಹಾರ ದಂಧೆಯ ಪ್ರಧಾನ ಸೂತ್ರಧಾರ ಕಾಸರಗೋಡು ಕಲ್ಲಟ್ರ ನಿವಾಸಿ ಮುಹಮ್ಮದ್ ನಜೀಬ್‍ನ ಕಲ್ನಡಿನಲ್ಲಿರುವ ಮನೆ ಸೇರಿದಂತೆ ರಾಜ್ಯದ ವಿವಿಧೆಡೆ ಗುರುವಾರ ಇ.ಡಿ ದಾಳಿ ನಡೆಸಲಾಗಿದೆ.
ಎರ್ನಾಕುಳಂ, ಕೊಲ್ಲಂನ ಕೆಲವೊಂದು ಆಸ್ಪತ್ರೆ ಹಾಗೂ ಅವಯವ ವ್ಯವಹಾರದ ಕೇಂದ್ರಗಳಲ್ಲಿ ಬೆಳಿಗ್ಗಿನಿಂದ ಏಕ ಕಾಲಕ್ಕೆ ಇ.ಡಿ ದಾಳಿ ಆಯೋಜಿಸಲಾಗಿತ್ತು. ಇದೊಂದು ಅಂತಾರಾಷ್ಟ್ರೀಯ ಅವಯವ ಸಾಗಾಟ ದಂಧೆಯಾಗಿರುವುದಾಗಿ ಇ.ಡಿ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಅವಯವ ದಾನಕ್ಕಾಗಿ ಮುಂದಾಗುವವರಿಗೆ 5 ಲಕ್ಷದಿಂದ 10 ಲಕ್ಷ ರೂಪಾಯಿ ತನಕ ನೀಡಿ ಅವರಿಂದ ಅವಯವಗಳನ್ನು ಪಡೆದ ಬಳಿಕ ಅವುಗಳನ್ನು 20ರಿಂದ 50 ಲಕ್ಷ ರೂ. ತನಕ ಮಾರಾಟ ಮಾಡುವುದು ದಂಧೆಕೋರರರ ಪ್ರಧಾನ ಕಸುಬಾಗಿದೆ ಇದರಲ್ಲಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹಣ ವ್ಯವಹಾರವೂ ನಡೆಯುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಇ.ಡಿ ಅಧಿಕಾರಿಗಳು ದಂಧೆಯ ಪ್ರಧಾನ ಸೂತ್ರಧಾರ ಮುಹಮ್ಮದ್ ನಜೀಬ್ ಮನೆ ಹಾಗೂ ಕಾಸರಗೋಡು ಮೇಲ್ಪರಂಬದಲ್ಲಿರುವ ಆತನ ಪ್ರಧಾನ ವ್ಯವಹಾರ ಕೇಂದ್ರವಾದ ಕಂಪ್ಯೂಟರ್ ಸೆಂಟರ್‍ಗಳಿಗೂ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ. ದಾಳಿಯ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.


