ನವದೆಹಲಿ: ಪಾಕಿಸ್ತಾನದ ಜೊತೆ ಭಾರತ ಮಾತುಕತೆ ಆರಂಭಿಸಬೇಕೇ? ಬೇಡವೇ? ಎಂಬ ಚರ್ಚೆಗಳು ದೇಶದಲ್ಲಿ ಜೋರಾಗಿ ನಡೆಯುತ್ತಿವೆ. ಕೆಲವರು ಉಭಯ ದೇಶಗಳ ನಡುವೆ ಮಾತುಕತೆ ಬೇಡ ಎಂದು ಪ್ರತಿಪಾದಿಸುತ್ತಿದ್ದಾರೆ. 'ಮಾತುಕತೆ ನಡೆಸುವುದಕ್ಕೆ ಎರಡೂ ದೇಶಗಳು ಬಾಗಿಲುಗಳನ್ನು ತೆರೆದಿರಬೇಕು' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ಸಲಹೆ ನೀಡಿದ್ದರು.
ಈ ರೀತಿ ಪರ-ವಿರೋಧ ಚರ್ಚೆಗಳ ನಡುವೆಯೇ, ಭಾರತ ಮತ್ತು ಪಾಕಿಸ್ತಾನದ ಪ್ರಮುಖ ವ್ಯಕ್ತಿಗಳು ಬೇರೆ ದೇಶಗಳಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿರುವುದು ಗಮನಾರ್ಹ.
ಉಭಯ ದೇಶಗಳ ಪ್ರಮುಖರು ನಡೆಸಿರುವ ಸಂವಾದವನ್ನು 'ಟ್ರ್ಯಾಕ್-2 ಮಾತುಕತೆ' ಎಂದು ಕರೆಯಲಾಗಿದೆ. ಈ 'ಮಾತುಕತೆ' ಕುರಿತು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಮಾಹಿತಿ ಇದ್ದರೂ, ಸರ್ಕಾರಗಳು ಇದರಲ್ಲಿ ಅಧಿಕೃತವಾಗಿ ಭಾಗಿಯಾಗಿಲ್ಲ ಎಂದು ಮೂಲಗಳು ಹೇಳಿವೆ.
ಎಲ್ಲಿ ಮಾತುಕತೆ?:
ಭಾರತ ಮತ್ತು ಪಾಕಿಸ್ತಾನದ ಪ್ರಮುಖ ವ್ಯಕ್ತಿಗಳು ಇತ್ತೀಚೆಗೆ ಕೊಲಂಬೊದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಬ್ಯಾಂಕಾಕ್‌ನಲ್ಲಿಯೂ ಮಾತುಕತೆ ನಡೆಸಿದ್ದಾರೆ. ಕಳೆದ ಕೆಲ ತಿಂಗಳಲ್ಲಿ ಇದೇ ರೀತಿಯ ಎರಡು ಸುತ್ತು ಮಾತುಕತೆ ನಡೆದಿವೆ ಎಂದು ಮೂಲಗಳು ಹೇಳಿವೆ.
'ರಕ್ಷಣಾತ್ಮಕ ಕಾರ್ಯತಂತ್ರ ವಿಶ್ಲೇಷಕರು, ಮಾಜಿ ರಾಜತಾಂತ್ರಿಕರು ಹಾಗೂ ಸೇನೆಯ ನಿವೃತ್ತ ಅಧಿಕಾರಿಗಳು ಈ ಅನಧಿಕೃತ ಮಾತುಕತೆಯಲ್ಲಿ ಭಾಗವಹಿಸಿದ್ದರು' ಎಂದು ಇವೇ ಮೂಲಗಳು ಹೇಳಿವೆ.
'ಟ್ರ್ಯಾಕ್-2' ಮಾತುಕತೆಗಳು ಮುಂದುವರಿಯಲಿವೆ. ಆದರೆ, ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳ ಮಟ್ಟದಲ್ಲಿ ಮಾತುಕತೆ ನಡೆಯುವುದಕ್ಕೆ ಈ ಬೆಳವಣಿಗೆ ದಾರಿ ಮಾಡಿಕೊಡುವ ಸಾಧ್ಯತೆ ಕಡಿಮೆ ಎಂದು ಮತ್ತೊಂದು ಮೂಲ ಹೇಳಿದೆ.
ಪ್ರತೀಕಾರ-ಮಾತುಕತೆ ದೂರ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ, 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತವು 'ಆಪರೇಷನ್ ಸಿಂಧೂರ' ಕೈಗೊಂಡಿತ್ತು. ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ನಂತರ, ಮೇ 10ರಂದು ಕದನ ವಿರಾಮ ಘೋಷಿಸಲಾಗಿತ್ತು. ಆ ಬಳಿಕ, ಪಾಕಿಸ್ತಾನ ದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಘೋಷಿಸಿತ್ತು.
'ತಟಸ್ಥ ಸ್ಥಳವೊಂದರಲ್ಲಿ ಮಾತುಕತೆ ನಡೆಸಲು ಭಾರತ ಮತ್ತು ಪಾಕಿಸ್ತಾನ ಸಮ್ಮತಿಸಿ, ಕದನ ವಿರಾಮ ಘೋಷಿಸಿವೆ' ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಆಗ ಹೇಳಿಕೊಂಡಿದ್ದರು.
ಅಮೆರಿಕದ ಈ ಮಾತನ್ನು ಸಾರಾಸ ಗಟಾಗಿ ತಿರಸ್ಕರಿಸಿದ್ದ ಪ್ರಧಾನಿ ನರೇಂದ್ರ ಮೋದಿ,'ಪಾಕಿಸ್ತಾನ ಜೊತೆ ಯಾವುದೇ ರೀತಿಯ ಮಾತುಕತೆಗೆ ಭಾರತ ಸಮ್ಮತಿಸಿಲ್ಲ' ಎಂದು ಸ್ಪಷ್ಟಪಡಿಸಿದ್ದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನು ನಿಲ್ಲಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಕೂಡ ಭಾರತ ತಿರಸ್ಕರಿಸುತ್ತಾ ಬಂದಿದೆ.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ, ಸಿಂಧೂ ನದಿ ಒಪ್ಪಂದವನ್ನು ಭಾರತವು ಅಮಾನತಿನಲ್ಲಿಟ್ಟಿದೆ. ಭಾರತದ ಈ ಕ್ರಮಕ್ಕೆ ಪಾಕಿಸ್ತಾನ ವಿರೋಧವನ್ನೂ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಯ ನಡುವೆಯೂ 'ಟ್ರ್ಯಾಕ್-2' ಮಾತುಕತೆ ನಡೆದಿರುವುದು ಗಮನಾರ್ಹ.

