ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು(ಸಿಬಿಎಸ್ಇ) 9ನೇ ತರಗತಿಯ ವಿದ್ಯಾರ್ಥಿಗಳಿಗೆ ಜುಲೈ 1ರಿಂದ ತ್ರಿಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಹೊಸ ಅರ್ಜಿಯೊಂದು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿದೆ.
'ಸಿಬಿಎಸ್ಇ ಮೇ 15ರಂದು ಹೊರಡಿಸಿರುವ ಸುತ್ತೋಲೆಯು ಅಸಮಂಜಸವಾಗಿದೆ' ಎಂದು ಶಿಕ್ಷಣ ತಜ್ಞೆ ಮತ್ತು ಮಹಾರಾಷ್ಟ್ರದ ಮಾಜಿ ಸಚಿವೆ ಡಾ. ಫೌಝಿಯಾ ಖಾನ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಲಾಗಿದೆ.
'ಯಾವುದೇ ತಾರ್ಕಿಕ ಕಾರಣಗಳಿಲ್ಲದೇ, ದಕ್ಷಿಣದ ರಾಜ್ಯಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವ ಮತ್ತು ಉತ್ತರ ರಾಜ್ಯಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಉದ್ದೇಶವನ್ನು ಸಿಬಿಎಸ್ಇಯ ಸುತ್ತೋಲೆ ಒಳಗೊಂಡಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು' ಎಂದು ಅರ್ಜಿದಾರರರು ಮನವಿ ಮಾಡಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿಗಳು ಎರಡು ಭಾರತೀಯ ಭಾಷೆ ಸೇರಿದಂತೆ ಒಟ್ಟು ಮೂರು ಭಾಷೆಗಳನ್ನು ಅಧ್ಯಯನ ಮಾಡುವುದನ್ನು ಜುಲೈ 1ರಿಂದ ಕಡ್ಡಾಯಗೊಳಿಸಲಾಗುತ್ತದೆ ಎಂದು ಸಿಬಿಎಸ್ಇ ಮೇ 15ರಂದು ಸುತ್ತೋಲೆ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಈ ಹಿಂದೆ ಸಲ್ಲಿಕೆಯಾಗಿದ್ದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್, ಮೇ 27ರಂದು ಸಿಬಿಎಸ್ಇಗೆ ನೋಟಿಸ್ ನೀಡಿತ್ತು.

