ಅಕ್ಟೋಬರ್ 2020ರಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಅಪರೂಪದ ಪ್ರಸಂಗ ನಡೆಯಿತು. ಕೋವಿಡ್-19 ಸಾಂಕ್ರಾಮಿಕ ರೋಗ, ಆಹಾರದ ಕೊರತೆ ಮತ್ತು ಅಂತರರಾಷ್ಟ್ರೀಯ ನಿರ್ಬಂಧದಿಂದಾಗಿ ಎದುರಾಗಿದ್ದ ಸಂಕಷ್ಟಗಳಿಂದ ದೇಶದ ಜನರನ್ನು ಮುಕ್ತಗೊಳಿಸಲು ನನ್ನ ಪ್ರಯತ್ನ ಸಾಕಾಗಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದರು.
ಇಡೀ ಜಗತ್ತು ಈ ವಿದ್ಯಮಾನವನ್ನು ಕುತೂಹಲದ ಕಣ್ಣಿನಿಂದ ನೋಡಿತ್ತು. ಇಡೀ ಜಗತ್ತಿನಿಂದ ಪ್ರತ್ಯೇಕಿಸಲ್ಪಟ್ಟಿದ್ದ ಉತ್ತರ ಕೊರಿಯಾ, ಸಂಪೂರ್ಣ ದುರ್ಬಲವಾಗಿ ಕಾಣಿಸುತ್ತಿತ್ತು. ಆದರೆ ಆರು ವರ್ಷಗಳ ನಂತರ, ಇಡೀ ಚಿತ್ರಣವೇ ಬದಲಾಗಿದೆ.
ಜಾಗತಿಕ ನಿರ್ಬಂಧಗಳ ನಡುವೆಯೂ ಉತ್ತರ ಕೊರಿಯಾ ತನ್ನ ಪರಮಾಣು ಶಸ್ತ್ರಾಗಾರವನ್ನು ವಿಸ್ತರಿಸಿದೆ. ರಷ್ಯಾದೊಂದಿಗಿನ ಸಂಬಂಧವನ್ನು ಬಲಪಡಿಸಿದೆ. ಚೀನಾದೊಂದಿಗಿನ ಬಾಂಧವ್ಯವನ್ನು ಸುಧಾರಿಸಿಕೊಂಡಿದೆ. ಇವೆಲ್ಲವೂ ಕಿಮ್ ಆವರ ನೇತೃತ್ವದಲ್ಲಿಯೇ ನಡೆದಿದೆ. ಆದರೆ ಈ ಪರಿವರ್ತನೆಯು ಯಾವುದೇ ರಾಜಕೀಯ ಸುಧಾರಣೆ ಅಥವಾ ಆರ್ಥಿಕ ಉದಾರೀಕರಣದಿಂದ ಉಂಟಾಗಿದ್ದಲ್ಲ. ಸರ್ಕಾರದ ಬಿಗಿ ನಿಯಮಗಳು, ವಿದೇಶಿ ಪ್ರಭಾವದ ದಮನ ಮತ್ತು ಉಕ್ರೇನ್‌ನಲ್ಲಿನ ರಷ್ಯಾದ ಯುದ್ಧದಿಂದ ಸೃಷ್ಟಿಯಾದ ಅನಿರೀಕ್ಷಿತ ಭೌಗೋಳಿಕ ರಾಜಕೀಯ ಲಾಭದ ಮೂಲಕ ಉಂಟಾಗಿದೆ.
ಎಲ್ಲವನ್ನೂ ಬದಲಿಸಿದ ಕೋವಿಡ್
ಕೋವಿಡ್-19 ವ್ಯಾಪಕವಾದಾಗ ಉತ್ತರ ಕೊರಿಯಾ ತನ್ನ ಅತ್ಯಂತ ಪ್ರಮುಖ ಆರ್ಥಿಕ ಪಾಲುದಾರನಾದ ಚೀನಾದೊಂದಿಗಿನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿತು. ಅಧಿಕಾರಿಗಳು ತೀವ್ರ ನಿರ್ಬಂಧಗಳನ್ನು ಹೇರಿದರು. ಕೆಲವು ಗಡಿ ಪ್ರದೇಶಗಳಲ್ಲಿ ಕಂಡಲ್ಲಿ ಗುಂಡು ಹಾರಿಸುವುದೂ ನಡೆದಿತ್ತು ಎಂದು ವಿಶ್ಲೇಷಕರು ಹೇಳುತ್ತಾರೆ.
ಈ ಬಿಗಿ ಕ್ರಮಗಳು ಸರಕುಗಳ ಹರಿವನ್ನು ಕಡಿಮೆಗೊಳಿಸಿದವು. ಕಾಳ ಸಂತೆಗೆ ಮೂಗುದಾರ ಬಿತ್ತು. ದಕ್ಷಿಣ ಕೊರಿಯಾದ ನಾಟಕಗಳು, ಚಲನಚಿತ್ರಗಳು ಮತ್ತು ಕೆ-ಪಾಪ್ ಸಂಗೀತಗಳಿಗೆ ನಿರ್ಬಂಧ ಹೇರಲಾಯಿತು. ಉತ್ತರ ಕೊರಿಯಾದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದ ಇವುಗಳನ್ನು ನಿಷೇಧಿಸಲಾಯಿತು. ಕಳ್ಳಸಾಗಣೆದಾರರು, ವ್ಯಾಪಾರಿಗಳು ಮತ್ತು ವಿದೇಶಿ ವಿಷಯಗಳನ್ನು ವಿತರಿಸಿದ ಆರೋಪ ಹೊತ್ತ ಜನರ ಮೇಲೆ ದಮನಕಾರಿ ನೀತಿಗಳನ್ನು ಪ್ರಯೋಗಿಸಲಾಯಿತು. ದಕ್ಷಿಣ ಕೊರಿಯಾದ ಮಾಧ್ಯಮಗಳನ್ನು ವೀಕ್ಷಿಸುವ ಅಥವಾ ಹಂಚಿಕೊಳ್ಳುವಾಗ ಸಿಕ್ಕಿಬಿದ್ದವರಿಗೆ ಹೊಸ ಕಾನೂನುಗಳ ಕಠಿಣ ಶಿಕ್ಷೆಗಳನ್ನು ವಿಧಿಸಲಾಯಿತು.
'ಹತ್ತರಲ್ಲಿ ಸುಮಾರು ಎಂಟು ಜನರು ದಕ್ಷಿಣ ಕೊರಿಯಾದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ಅವೆಲ್ಲವುಗಳಿಗೂ ನಿಷೇಧ ಹೇರಲಾಯಿತು' ಎಂದು ದೇಶ ತೊರೆದಿರುವ ಕಿಮ್ ಯು-ಮಿ ಹೇಳಿದ್ದಾರೆ.
ಇತರರನ್ನು ಹೆದರಿಸುವ ಉದ್ದೇಶದಿಂದ ಆರೋಪಿಗಳಿಗೆ ದೇಶಭ್ರಷ್ಟರು ಎನ್ನುವ ಹಣೆಪಟ್ಟಿ ಕಟ್ಟಿ ಸಾರ್ವಜನಿಕವಾಗಿ ಮರಣದಂಡಣೆ ನೀಡಲಾಯಿತು. ಮಾಧ್ಯಮಗಳ ಆಚೆಗೂ ಈ ದಮನ ಪ್ರಕ್ರಿಯೆ ವಿಸ್ತರಿಸಿತು. ಮಾರುಕಟ್ಟೆಗಳು ಕಟ್ಟುನಿಟ್ಟಾದ ನಿಯಂತ್ರಣಕ್ಕೆ ಒಳಪಟ್ಟವು. ಸ್ವತಂತ್ರವಾಗಿ ಹಣ ಗಳಿಸುವ ಅವಕಾಶಗಳು ಕ್ಷೀಣಿಸಿದವು. ಹಣಗಳಿಸಲು ಇರುವ ಎಲ್ಲಾ ಮಾರ್ಗಗಳು ಮುಚ್ಚಿದ್ದೇ ದೊಡ್ಡ ಸಮಸ್ಯೆ ಎಂದು 2023ರಲ್ಲಿ ದೇಶ ತೊರೆದ ಕಿಮ್ ಇಲ್-ಹ್ಯೋಕ್ ವಿವರಿಸುತ್ತಾರೆ. ಇವರು ತಮ್ಮ ಕುಟುಂಬದೊಂದಿಗೆ ದೋಣಿ ಮೂಲಕ ದೇಶ ತೊರೆದಿದ್ದರು.
ಯಾವುದೇ ಸಮೂಹ ಲಸಿಕಾ ಅಭಿಯಾನವಿಲ್ಲದೆ ಕೋವಿಡ್-19 ಅನ್ನು ನಿಗ್ರಹಿಸಿರುವುದಾಗಿ ಉತ್ತರ ಕೊರಿಯಾ ಹೇಳಿಕೊಂಡಿದೆ. ಅಲ್ಲದೆ ಕೋವಿಡ್‌ನಿಂದ ಮೃತಪಟ್ಟವರೂ ಕಡಿಮೆ ಎಂದು ಹೇಳಿಕೊಂಡಿದೆ. ಆದರೆ ದೇಶ ತೊರೆದವರು ನಿಜಾಂಶವನ್ನು ಬಿಚ್ಚಿಟ್ಟಿದ್ದಾರೆ. ಆಹಾರ ಕೊಡದೆ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು ಎಂಬ ಭಯದಿಂದ ಅನೇಕ ಮಂದಿ ತಮಗೆ ಕಾಯಿಲೆ ಇರುವುದನ್ನೇ ಮುಚ್ಚಿಡುತ್ತಿದ್ದರು. ಔಷಧಗಳು ಲಭ್ಯವಿಲ್ಲದ ಕಾರಣ, ಕೆಲವರು ಮರದ ತೊಗಟೆಯ ರಸದಂತಹ ನಾಟಿ ವೈದ್ಯಕೀಯ ಪದ್ಧತಿಗಳ ಮೊರೆ ಹೋದರು. ಶವಪೆಟ್ಟಿಗೆ ಕೊಳ್ಳಲು, ಗುಂಡಿ ತೋಡಲು ಹಲವರ ಬಳಿ ಶಕ್ತಿ ಇರಲಿಲ್ಲ ಎಂದು ಕಿಮ್ ಇಲ್-ಹ್ಯೋಕ್ ತಿಳಿಸಿದ್ದಾರೆ.
ವಿದೇಶಿ ಮಾಹಿತಿಗಳ ನಿಗ್ರಹ
ಹೊರಗಿನ ಮಾಹಿತಿಯ ಬಗ್ಗೆ ಉತ್ತರ ಕೊರಿಯಾ ಆಡಳಿತಕ್ಕಿರುವ ಭಯವು ರಾಜಕೀಯ ಮತ್ತು ವೈಯಕ್ತಿಕ ಎರಡೂ ಆಯಾಮಗಳನ್ನು ಹೊಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಕಿಮ್ ಅವರ ತಾಯಿ ಕೋ ಯೋಂಗ್-ಹುಯಿ ಜಪಾನ್‌ನಲ್ಲಿ ಜನಿಸಿದವರು ಎಂದು ವರದಿಯಾಗಿದೆ. ಜಪಾನ್ ವಿರೋಧಿ ಭಾವನೆಯು ಸಿದ್ಧಾಂತದ ವಿಷಯವಾಗಿರುವ ದೇಶದಲ್ಲಿ ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿದೆ.
ಈ ಹಿಂದೆ ದಕ್ಷಿಣ ಕೊರಿಯಾದ ಕಾರ್ಯಕರ್ತರು ಕಿಮ್ ಅವರ ಕೌಟುಂಬಿಕ ಹಿನ್ನೆಲೆಯ ಬಗ್ಗೆ ಕರಪತ್ರಗಳನ್ನು ಹೊತ್ತ ಬಲೂನ್‌ಗಳನ್ನು ಉತ್ತರ ಕೊರಿಯಾಕ್ಕೆ ಹಾರಿಸುತ್ತಿದ್ದರು. ಇಂತಹ ಅಭಿಯಾನಗಳನ್ನು, ವಿದೇಶದಿಂದ ಬರುವ ಮಾಹಿತಿಯನ್ನು ನಿರ್ಬಂಧಿಸಲು ಕಠಿಣ ನಿಯಮಗಳನ್ನು ವಿಧಿಸಲಾಗಿತ್ತು.
ಸಮೀಕರಣ ಬದಲಾಯಿಸಿದ ರಷ್ಯಾ-ಉಕ್ರೇನ್ ಯುದ್ಧ
ಸಾಂಕ್ರಾಮಿಕ ರೋಗವು ಕಿಮ್‌ಗೆ ದೇಶೀಯವಾಗಿ ನಿಯಂತ್ರಣವನ್ನು ಬಿಗಿಗೊಳಿಸಲು ಸಹಾಯ ಮಾಡಿದರೆ, ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಅವಕಾಶವನ್ನು ಸೃಷ್ಟಿಸಿತು.
ರಷ್ಯಾಗೆ ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳು ಮತ್ತು ಸೈನಿಕರನ್ನು ಉತ್ತರ ಕೊರಿಯಾ ಒದಗಿಸಿತು.ಅದಕ್ಕೆ ಪ್ರತಿಯಾಗಿ, ಆಹಾರ, ತೈಲ, ಮಿಲಿಟರಿ ತಂತ್ರಜ್ಞಾನ ಮತ್ತು ವ್ಯೂಹಾತ್ಮಕ ಬೆಂಬಲವನ್ನು ಪಡೆದುಕೊಂಡಿತು ಎಂದು ವರದಿಗಳು ತಿಳಿಸಿವೆ. ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಯ ಅಂದಾಜಿನ ಪ್ರಕಾರ ಸುಮಾರು 16,000 ಉತ್ತರ ಕೊರಿಯಾದ ಸೈನಿಕರು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾಗವಹಿಸಿದ್ದಾರೆ.
ಈ ಯುದ್ಧ ಉತ್ತರ ಕೊರಿಯಾಗೆ ಮತ್ತೊಂದು ಪ್ರಯೋಜನ ನೀಡಿತು; ಅನುಭವ. ಉತ್ತರ ಕೊರಿಯಾದ ಪಡೆಗಳು ಡ್ರೋನ್ ಯುದ್ಧ, ಯುದ್ಧಭೂಮಿಯ ಸಂವಹನ ಮತ್ತು ಆಧುನಿಕ ಯುದ್ಧ ತಂತ್ರಗಳ ಬಗ್ಗೆ ಮೌಲ್ಯಯುತವಾದ ಪ್ರಾಯೋಗಿಕ ಜ್ಞಾ ನಗಳಿಸಿಕೊಂಡಿತು ಎನ್ನುತ್ತಾರೆ ವಿಶ್ಲೇಷಕರು.
ಉತ್ತರ ಕೊರಿಯಾ ಹಣ ಗಳಿಸಿದ್ದು ಹೇಗೆ?
ರಷ್ಯಾ ಕಥೆ ಕೇವಲ ಒಂದು ಭಾಗವಷ್ಟೇ. ಉತ್ತರ ಕೊರಿಯಾವು ಸೈಬರ್ ಕಾರ್ಯಾಚರಣೆಗಳು, ಸಾಗರೋತ್ತರ ಕಾರ್ಮಿಕರು ಮತ್ತು ಕಳ್ಳಸಾಗಣೆ ಜಾಲಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಉತ್ತರ ಕೊರಿಯಾಕ್ಕೆ ಸಂಬಂಧಿಸಿದ ಗುಂಪುಗಳು ಶತಕೋಟಿ ಡಾಲರ್ ಮೌಲ್ಯದ ಕ್ರಿಪ್ಟೊಕರೆನ್ಸಿಯನ್ನು ಕಳವು ಮಾಡಿದ್ದಾರೆ ಎನ್ನುವ ಆರೋಪ ಇದೆ. ನಕಲಿ ಗುರುತಿನ ಚೀಟಿ ಮೂಲಕ ಐಟಿ ಉದ್ಯೋಗಿಗಳು ವಿದೇಶಗಳಲ್ಲಿ ಹಣ ಗಳಿಸಿದರು.
ಚಿನ್ನದ ಕಳ್ಳಸಾಗಣೆ ಆದಾಯದ ಪ್ರಮುಖ ಮೂಲವಾಗಿದೆ ಎಂದು ದೇಶದಿಂದ ಗಡೀಪಾರದವರು ವಿವರಿಸಿದ್ದಾರೆ. ಚಿನ್ನದ ಬಿಸ್ಕತ್ತುಗಳನ್ನು ಸುಲಭವಾಗಿ ಕಳ್ಳಸಾಗಣೆ ಮಾಡಿ, ಅವುಗಳಿಂದ ಕೊಟ್ಯಂತರ ಆದಾಯ ಪಡೆದುಕೊಂಡಿತು.
ಚೇತರಿಕೆ
2024ರ ವೇಳೆಗೆ ಉತ್ತರ ಕೊರಿಯಾದ ಆರ್ಥಿಕತೆಯು ಶೇ 3.7 ರಷ್ಟು ಬೆಳವಣಿಗೆಯಾಗಿದೆ ಎಂದು ದಕ್ಷಿಣ ಕೊರಿಯಾದ ಕೇಂದ್ರ ಬ್ಯಾಂಕ್ ಅಂದಾಜಿಸಿದೆ. ಇದು 8 ವರ್ಷಗಳಲ್ಲೇ ಅಧಿಕ. ಇದರ ಬಳಿಕ ಹಲವಾರು ಅಭಿವೃದ್ಧಿಗಳು ಕಣ್ಣಿಗೆ ಗೋಚರಿಸಿದವು. ರಾಜಧಾನಿ ಪ್ಯೊಂಗ್ಯಾಂಗ್ ಮತ್ತು ಹಲವು ನಗರಗಳಲ್ಲಿ ಹೊಸ ಅಪಾರ್ಟ್‌ಮೆಂಟ್ ಗೋಪುರಗಳು ಕಾಣಿಸಿಕೊಂಡವು. ರಸ್ತೆಗಳಲ್ಲಿ ವಾಹನಗಳ ಸಂಖ್ಯೆಗಳು ಹೆಚ್ಚಾದವು. ಚೀನಾ ನಿರ್ಮಿತ ಎಲೆಕ್ಟ್ರಿಕ್ ವಾಹನಗಳು ಯಥೇಚ್ಛವಾದವು. ಗ್ಯಾಸ್ ಸ್ಟೇಷನ್‌ಗಳ ಸಂಖ್ಯೆ ಏರಿಕೆಯಾದವು. ನಿರ್ಮಾಣ ಯೋಜನೆಗಳು ಪುನರಾರಂಭಗೊಂಡವು.
ರಸ್ತೆ ಬದಿ ಪ್ರಕಾಶಮಾನವಾದ ನಿಯಾನ್ ದೀಪಗಳನ್ನು ಅಳವಡಿಸಲಾಗಿದೆ. ವಾಣಿಜ್ಯ ಪ್ರದೇಶಗಳಲ್ಲಿ ಜನಸಂದಣಿ ಕಾಣಿಸುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಅಪಾರ್ಟ್‌ಮೆಂಟ್‌ಗಳ ಎಲಿವೇಟರ್‌ಗಳು ಮತ್ತೆ ಕಾರ್ಯನಿರ್ವಹಿಸುತ್ತಿದೆ. ಬಿಯರ್ ಹಾಲ್‌ಗಳು ಗ್ರಾಹಕರನ್ನು ಆಕರ್ಷಿಸಿದರೆ, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಆಹಾರ ವಿತರಣೆ ಮತ್ತು ಶಾಪಿಂಗ್ ಸೇವೆಗಳು ಮತ್ತೆ ಲಭ್ಯವಾಗಿವೆ ಎಂದು ಅಲ್ಲಿಗೆ ತೆರಳಿರುವ ಪ್ರವಾಸಿಗರು ಮಾಹಿತಿ ಹಂಚಿಕೊಂಡಿದ್ದಾರೆ.
ಹಾಗೇ ಉಳಿದ ಸಮಸ್ಯೆ
ಉತ್ತರ ಕೊರಿಯಾದಲ್ಲಿ ಚೇತರಿಕೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೂ, ಪ್ರಮುಖ ಸಮಸ್ಯೆಗಳು ಹಾಗೆಯೇ ಉಳಿದಿವೆ. ಅಕ್ಕಿ ಬೆಲೆ ತೀವ್ರ ಏರಿಕೆಯಾಗಿದೆ. ಕರೆನ್ಸಿ ಗಣನೀಯವಾಗಿ ದುರ್ಬಲಗೊಂಡಿದೆ. ರಾಜಧಾನಿಯ ಹೊರಗೆ ಬಡತನ ಇಂದಿಗೂ ವ್ಯಾಪಕವಾಗಿದೆ. ಆರ್ಥಿಕ ಬೆಳವಣಿಗೆಯ ಪ್ರಯೋಜನಗಳು ಉಳ್ಳವರು ಮತ್ತು ಪ್ಯೊಂಗ್ಯಾಂಗ್ ನಿವಾಸಿಗಳ ನಡುವೆ ಮಾತ್ರ ಕೇಂದ್ರೀಕೃತವಾಗಿವೆ.
ಉತ್ತರ ಕೊರಿಯಾ ಸರ್ಕಾರವು ಸಾಂಕ್ರಾಮಿಕ ರೋಗದ ಸಮಯದಲ್ಲಿ ಇದ್ದದ್ದಕ್ಕಿಂತ ಇಂದು ಹೆಚ್ಚು ಪ್ರಬಲವಾಗಿ ಕಾಣುತ್ತಿದೆ. ಇದರರ್ಥ ಎಲ್ಲಾ ಉತ್ತರ ಕೊರಿಯನ್ನರ ಜೀವನವು ಸಮಾನವಾಗಿ ಸುಧಾರಿಸಿದೆ ಎಂದಲ್ಲ.
ಕ್ಷಮೆಯಿಂದ ಪರಿವರ್ತನೆವರೆಗೆ
2020ರಲ್ಲಿ ದೇಶ ಸಂಕಷ್ಟದ ಸಮಯದಲ್ಲಿ ಇದ್ದಾಗ ಕಿಮ್ ದೇಶದ ಜನರ ಕ್ಷಮೆ ಕೇಳಿದ್ದರು. ಇದೀಗ ಉಂಟಾಗಿರುವ ಬದಲಾವಣೆಯಲ್ಲಿ ಅವರು ಅದ್ಭುತ ಪರಿವರ್ತನೆ ಎಂದು ಬಣ್ಣಿಸುತ್ತಿದ್ದಾರೆ. ಉತ್ತರ ಕೊರಿಯಾ ಇನ್ನು ಮುಂದೆ ಹೊರಗಿನ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಘೋಷಿಸಿದ್ದಾರೆ. ತನ್ನ ಮಗಳೊಂದಿಗೆ ಸೇರಿ ಹಲವು ಕ್ಷಿಪಣಿ ಪರೀಕ್ಷೆಗಳನ್ನು ವೀಕ್ಷಿಸಿದ್ದಾರೆ.
ಸಾಂಕ್ರಾಮಿಕ ರೋಗವು ಸರ್ಕಾರಕ್ಕೆ ಬಿಗಿ ನಿಯಂತ್ರಣ ತೆಗೆದುಕೊಳ್ಳಲು ಸಹಾಯ ಮಾಡಿದರೆ, ರಷ್ಯಾ ಯುದ್ಧವು ಹೊಸ ವ್ಯೂಹಾತ್ಮಕ ಅವಕಾಶಗಳನ್ನು ಸೃಷ್ಟಿಸಿತು. ಒಟ್ಟಾರೆ, ದೇಶದ ಅನೇಕ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳು ಬಗೆಹರಿಯದಿದ್ದರೂ, ಅನೇಕ ವಿಶ್ಲೇಷಕರ ನಿರೀಕ್ಷೆಯನ್ನು ಹುಸಿ ಮಾಡಿ ಕಿಮ್ ಜಾಂಗ್-ಉನ್ ಹೆಚ್ಚು ಆತ್ಮವಿಶ್ವಾಸಗಳಿಸಿದರು. ರಾಜಕೀಯ ಬಿಕ್ಕಟ್ಟಿನಿಂದ ಹೊರಬಂದರು.
ಆಧಾರ: ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ರಾಯಿರರ್ಸ್ ವರದಿಗಳು.

