ನವದೆಹಲಿ: ವ್ಯವಸ್ಥೆಯ ಮೇಲಿನ ನಿಯಂತ್ರಣ ಕಳೆದುಹೋಗುತ್ತಿರುವ ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ತುರ್ತುಪರಿಸ್ಥಿತಿಯಂತಹ ಸನ್ನಿವೇಶವನ್ನು ಸೃಷ್ಟಿಸಬಹುದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ. ಹಾಗೆಯೇ, ಮೋದಿ ಅವರು ವರ್ಷದ ಒಳಗೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಪಕ್ಷದ 'ಆದಿವಾಸಿ ಕಾಂಗ್ರೆಸ್' ಘಟಕ ಆಯೋಜಿಸಿದ್ದ ಆದಿವಾಸಿ ನಾಯಕರ ಸಮಾವೇಶದಲ್ಲಿ ಮಾತನಾಡಿರುವ ರಾಹುಲ್, 'ಜಾಗತಿಕ ಆರ್ಥಿಕ ಏರಿಳಿತಗಳ ಎದುರು ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದ ಆಘಾತ ನಿಯಂತ್ರಣ ವ್ಯವಸ್ಥೆಯನ್ನೇ ಬಿಜೆಪಿ ಆಡಳಿತ ತೆಗೆದು ಹಾಕಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಭೀಕರ ಆರ್ಥಿಕ ಸಂಕಷ್ಟ ಎದುರಾಗಬಹುದು' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ವ್ಯವಸ್ಥೆಯಲ್ಲಿ ಬಂಡಾಯದ ಬಿಸಿ: ಎದುರಾಗಲಿದೆ ಭಾರಿ ಬಿಕ್ಕಟ್ಟು
'ದೇಶದ ಸಾಂಸ್ಥಿಕ ವ್ಯವಸ್ಥೆಯಲ್ಲಿ ಬಂಡಾಯದ ಬಿಸಿ ಶುರುವಾಗಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದು ನಿಮಗೆ ಅನ್ನಿಸುತ್ತಿರಬಹುದು. ಮುಖ್ಯ ಚುನಾವಣಾ ಆಯುಕ್ತರ ಸಂದೇಶಗಳೇ ನಮಗೆ ಬರುತ್ತಿವೆ. ಗುಪ್ತಚರ, ನ್ಯಾಯಾಂಗ ವ್ಯವಸ್ಥೆಯಲ್ಲಿನ ಅನೇಕ ಹಿರಿಯರು ವ್ಯವಸ್ಥೆಯ ಬಗ್ಗೆ ರೋಸಿ ಹೋಗಿದ್ದಾರೆ. ಹಲವರು ಬಂಡಾಯದ ಮನಸ್ಥಿತಿಯಲ್ಲಿರುವುದಾಗಿ ಮಾಹಿತಿ ನೀಡಿದ್ದಾರೆ' ಎಂದು ಹೇಳಿದ್ದಾರೆ.
ಚುನಾವಣಾ ಅಕ್ರಮಗಳ ಬಗ್ಗೆ ಜನರಿಗೆ ತಿಳಿದರೆ, ಆರ್ಥಿಕ ಒತ್ತಡ, ಬಡತನ, ಸಂಕಷ್ಟಗಳ ವಿರುದ್ಧ ಜನರ ಆಕ್ರೋಶ ಹೆಚ್ಚಾಗುವ ಬಗ್ಗೆ ಚುನಾವಣಾ ಆಯುಕ್ತರಲ್ಲಿ ಆತಂಕವಿಲ್ಲವೇ ಎಂಬ ಪ್ರಶ್ನೆಗೆ, 'ಇಡೀ ವ್ಯವಸ್ಥೆಯೇ ಒಳಗಿನಿಂದ ನಡುಗುತ್ತಿದೆ' ಎಂದಿದ್ದಾರೆ. ಹಾಗೆಯೇ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಅವರ ಮಕ್ಕಳು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕುರಿತ ಮಾಹಿತಿ ತಮಗೆ ಸಿಗುತ್ತಿದೆ ಎಂದೂ ಹೇಳಿಕೊಂಡಿದ್ದಾರೆ.
'ಸಾರ್ವಜನಿಕರ ಆಕ್ರೋಶವನ್ನು ನಿಯಂತ್ರಿಸಲು ಮತ್ತು ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಸೃಷ್ಟಿಸಲು ಅವರು ಪ್ರಯತ್ನಿಸಬಹುದು. ಅಂತಹ ಕೆಲಸ ಮಾಡುವ ಸಾಧ್ಯತೆ ಇದೆ' ಎಂದಿರುವ ಕಾಂಗ್ರೆಸ್ ನಾಯಕ, ಇಡೀ ವ್ಯವಸ್ಥೆ ನಿಯಂತ್ರಣದಿಂದ ಜಾರುವ ಹಂತ ತಲುಪುತ್ತಿದೆ ಎಂದೂ ಪ್ರತಿಪಾದಿಸಿದ್ದಾರೆ.
'ಮೋದಿ ಯಾವ ವ್ಯವಸ್ಥೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರೋ.. ಆ ವ್ಯವಸ್ಥೆಯೇ ನಮಗೆ ಮಾಹಿತಿ ನೀಡುತ್ತಿದೆ. ಹಾಗಾಗಿ, ಮೋದಿಗೆ ಆತಂಕ ಶುರುವಾಗಿದೆ. ಇದು ಸದ್ಯದ ವಿದ್ಯಮಾನ. ಈ ಮಾತುಗಳನ್ನು ನೆನಪಿಟ್ಟುಕೊಳ್ಳಿ; ನನ್ನ ಅಂದಾಜಿನ ಪ್ರಕಾರ ಮೋದಿ ಒಂದು ವರ್ಷವೂ ಪ್ರಧಾನಿಯಾಗಿ ಉಳಿಯುವುದಿಲ್ಲ' ಎಂದು ಒತ್ತಿ ಹೇಳಿದ್ದಾರೆ.
'ದೇಶದ ಜನರು ತಮ್ಮ ಜೀವಿತಾವಧಿಯಲ್ಲೇ ಕಂಡಿರದಂತಹ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದ್ದಾರೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಎಚ್ಚರಿಸಿದ್ದಾರೆ.
ವನವಾಸಿ vs ಆದಿವಾಸಿ
ಇದೇ ವೇಳೆ, ಬಿಜೆಪಿ - ಆರ್‌ಎಸ್‌ಎಸ್ ಆದಿವಾಸಿ ವಿರೋಧಿ ಮನಸ್ಥಿತಿ ಹೊಂದಿವೆ. ಬುಡಕಟ್ಟು ಜನರ ನೆಲ, ಜಲ, ಅರಣ್ಯವನ್ನು ಕಸಿದುಕೊಳ್ಳಲು ಅವು ಪ್ರಯತ್ನಿಸುತ್ತಿವೆ. ಈ ಸಮುದಾಯದವರು ಕಾಡಿನಲ್ಲಿ ವಾಸಿಸುವವರು ಎಂಬುದಾಗಿ ಬಿಂಬಿಸುವುದಕ್ಕಾಗಿಯೇ 'ವನವಾಸಿ' ಪದವನ್ನು ಬಳಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಒಂದೆಡೆ ವನವಾಸಿ; ಮತ್ತೊಂದೆಡೆ ಆದಿವಾಸಿ ಎನ್ನಲಾಗುತ್ತಿದೆ. ಆದಿವಾಸಿ ಎಂಬುದು ನಿಮಗೆ ನೀವು ಕರೆದುಕೊಳ್ಳುವ ಹೆಸರು. ಇದರ ಅರ್ಥ, ಈ ಭೂಮಿಯ ಮೂಲ ನಿವಾಸಿಗಳು ನೀವು. ಇಲ್ಲಿ ಜೀವಿಸಿದ ಮೊದಲಿಗರು ನೀವು. ವನವಾಸಿ ಎಂದರೆ ಕಾಡಿನ ಜನರು ಎಂದರ್ಥ. ಆ ಪದವು ನಿಮ್ಮನ್ನು ಸಂಸ್ಕೃತಿ, ಇತಿಹಾಸ, ಭಾಷೆಯೇ ಇಲ್ಲದವರು ಎಂಬಂತೆ ವ್ಯಾಖ್ಯಾನಿಸುತ್ತದೆ' ಎಂದು ವಿವರಿಸಿದ್ದಾರೆ.
'ನಿಮ್ಮ ಇತಿಹಾಸ, ನಿಮ್ಮ ಪರಂಪರೆ, ಸಾವಿರಾರು ವರ್ಷಗಳಿಂದ ಇಲ್ಲಿ ಏನಾಗುತ್ತಿತ್ತು ಎಂಬುದರ ಬಗ್ಗೆ ನಿಮಗಿರುವ ಜ್ಞಾನ ಇವೆಲ್ಲವೂ, ನನ್ನ ಪ್ರಕಾರ ರಾಷ್ಟ್ರೀಯ ಸಂಪತ್ತು. ಅದು ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಅತ್ಯಮೂಲ್ಯವಾದದ್ದು. ಅಂತಹ ಬೇರುಗಳನ್ನು ಕತ್ತರಿಸಲು, ನಾಶ ಮಾಡಲು ಹಾಗೂ ದೇಶದ ಇತಿಹಾಸವನ್ನೇ ಹತ್ತಿಕ್ಕಲು 'ವನವಾಸಿ' ಪದವನ್ನು ಬಳಸಲಾಗುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

