ನವದೆಹಲಿ : ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನ ಮತ್ತು ನಿರೂಪಣೆ ಕುರಿತು ಕೇಂದ್ರ ಸರ್ಕಾರವು ಸಲ್ಲಿಸಿರುವ ವರದಿಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸುಪ್ರೀಂಕೋರ್ಟ್ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿದೆ.
ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ ಮಹಾನಿರ್ದೇಶಕರಾದ ಕಾಂಚನ್ ದೇವಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
2026ರ ಆಗಸ್ಟ್ 31ರ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಹಿಂದಿನ ವರದಿಯಲ್ಲಿ 'ಪ್ರಮುಖ ದ್ವಂದ್ವ' ಎಂದು ಉಲ್ಲೇಖಿಸಿರುವ ಅಂಶಗಳನ್ನು ಪರಿಹರಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಸಿದ್ಧಪಡಿಸಿದ ವರದಿಯ ಅನುಷ್ಠಾನವನ್ನು ಸುಪ್ರೀಂ ಕೋರ್ಟ್ ಕಳೆದ ಡಿಸೆಂಬರ್ 29ರಂದು ತಡೆಹಿಡಿದಿತ್ತು. ಹೊಸ ವೈಜ್ಞಾನಿಕ ಮತ್ತು ಪರಿಸರ ಮೌಲ್ಯಮಾಪನವನ್ನು ಕೈಗೊಳ್ಳಲು ಸ್ವತಂತ್ರ ತಜ್ಞರ ಮಂಡಳಿಯ ಅಗತ್ಯವನ್ನು ಒತ್ತಿ ಹೇಳಿತ್ತು.
ಭಾರತೀಯ ಅರಣ್ಯ ಸರ್ವೇಕ್ಷಣೆಯ ನಿವೃತ್ತ ಮಹಾನಿರ್ದೇಶಕ ಡಾ. ಸುಭಾಷ್ ಅಶುತೋಷ್, ಭಾರತೀಯ ಭೂ ಸರ್ವೇಕ್ಷಣೆಯ ನಿವೃತ್ತ ನಿರ್ದೇಶಕ ಡಾ. ರಾಜೇಂದ್ರ ಕುಮಾರ್ ಶರ್ಮ, ಪರಿಸರ ಸಚಿವಾಲಯದ ನಿವೃತ್ತ ಜಂಟಿ ಕಾರ್ಯದರ್ಶಿ ಬ್ರಿಜ್ ಮೋಹನ್ ಸಿಂಗ್ ರಾಥೋಡ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಅಶೋಕ್ ಕೆ. ಭಟ್ನಾಗರ್ ಅವರನ್ನು ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್‌ನ ಪ್ರಾಧ್ಯಾಪಕ ಜಗದೀಶ್ ಕೃಷ್ಣಮೂರ್ತಿ ಮತ್ತು ಹರಿಯಾಣ ಕೇಂದ್ರೀಯ ವಿಶವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಲಕ್ಷ್ಮೀಕಾಂತ್ ಶರ್ಮ ಅವರನ್ನು ಅಗತ್ಯ ಸಮಯದಲ್ಲಿ ಸಮಿತಿಗೆ ನೆರವು ನೀಡಲು ವಿಶೇಷ ಆಹ್ವಾನಿತರಾಗಿ ನ್ಯಾಯಾಲಯ ನೇಮಿಸಿದೆ.
ಸಮಿತಿಯ ಸದಸ್ಯ ಕಾರ್ಯದರ್ಶಿ ಸ್ಥಾನಕ್ಕೆ ನಿರ್ದೇಶಕರ ಶ್ರೇಣಿಯ ಅಧಿಕಾರಿ ಯೊಬ್ಬರನ್ನು ನಾಮನಿರ್ದೇಶನ ಮಾಡುವಂತೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
2025 ಅಕ್ಟೋಬರ್‌ನಲ್ಲಿ ಸಲ್ಲಿಕೆಯಾಗಿರುವ ವರದಿಯ ಬಗ್ಗೆ ಎದ್ದಿರುವ ಹಲವು ಪ್ರಶ್ನೆಗಳ ಕುರಿತು ಪರಿಶೀಲನೆ ನಡೆಸುವ ಹೊಣೆಗಾರಿಕೆ ಹೊಸ ಸಮಿತಿಯ ಮೇಲಿದೆ.
2025ರ ವರದಿಯಲ್ಲಿ ಅರಾವಳಿ ಬೆಟ್ಟಗಳನ್ನು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬೆಟ್ಟಗಳ ನಡುವಿನ 500 ಮೀಟರ್ ಒಳಗಿನ ಪ್ರದೇಶಕ್ಕೆ ಸೀಮಿತ ಗೊಳಿಸಿರುವುದರಿಂದ ಸಂರಕ್ಷಿತ ಪ್ರದೇಶದ ವ್ಯಾಪ್ತಿ ಕಿರಿದಾಗುತ್ತದೆ ಮತ್ತು ಇದರಿಂದ ಗಣಿಗಾರಿಕೆ ಮತ್ತು ಮಾನವಹಸ್ತಕ್ಷೇಪ ಆಗುತ್ತದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ.

