ಡೆಹ್ರಾಡೂನ್: ನೀಟ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮಾಜಿ ಯೋಧನ ಪುತ್ರಿ, ದ್ವಿತೀಯ ಪಿಯುಸಿ ಟಾಪರ್ ಆಗಿದ್ದ ರಿಯಾ ಕುಮಾರಿ ಥಾಪಾ ಅವರು ತೀವ್ರ ಒತ್ತಡಕ್ಕೆ ಒಳಗಾಗಿ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
1999ರ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಮಾಜಿ ಯೋಧ ರಾಜೇಶ್ ಥಾಪಾ ಅವರ ಪುತ್ರಿ ರಿಯಾ ಕುಮಾರಿ (23) ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ
'ರಿಯಾ ಅವರ ತಾಯಿ ಮಗಳನ್ನು ಊಟಕ್ಕೆ ಕರೆಯಲು ಮಂಗಳವಾರ ಬೆಳಗ್ಗೆ ಆಕೆಯ ಕೋಣೆಯ ಬಳಿ ಹೋಗಿದ್ದರು. ಎಷ್ಟು ಕರೆದರೂ ಆಕೆ ಬಾಗಿಲು ತೆಗೆಯಲಿಲ್ಲ. ಮಗಳ ನಡೆಗೆ ಆತಂಕಗೊಂಡ ತಾಯಿ, ರಿಯಾಳ ತಂದೆ ಹಾಗೂ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ. ನಂತರ ಕೋಣೆಯ ಬಾಗಿಲನ್ನು ಬಲವಂತದಿಂದ ತೆಗೆದಾಗ ರಿಯಾ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ' ಎಂದು ಪೊಲೀಸ್ ಅಧಿಕಾರಿ ಅಂಕಿತ್ ಕಂದರಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ರಿಯಾಳ ಕೋಣೆಯಲ್ಲಿ ಪತ್ರ ಒಂದು ಸಿಕ್ಕಿದ್ದು, ಅದರಲ್ಲಿ 'ಲವ್ ಯೂ ಅಪ್ಪ- ಅಮ್ಮ, ಈ ಸಾವಿಗೆ ಯಾರು ಕಾರಣವಲ್ಲ. ನನ್ನ ಅಸಮರ್ಥತೆಯಿಂದಾಗಿ ಈ ನಿರ್ಧಾರ ಕೈಗೊಂಡಿದ್ದೇನೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಓದಿನಲ್ಲಿ ಮುಂದಿದ್ದ ರಿಯಾ, ಪ್ರತಿದಿನ ತಡರಾತ್ರಿಯವರೆಗೂ ಓದಿಕೊಳ್ಳುತ್ತಿದ್ದರು. ಓದಿನ ವಿಷಯದಲ್ಲಿ ಹತಾಶೆಗೊಂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುವುದು' ಎಂದು ಪೊಲೀಸರು ತಿಳಿಸಿದ್ದಾರೆ.
ರಿಯಾ ಅವರು ಕೆಲವು ತಿಂಗಳ ಹಿಂದೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರು. ಜೂನ್ 21 ರಂದು ನಡೆಯಬೇಕಿದ್ದ ನೀಟ್ ಮರು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

