ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರಿಗೆ ಸಾಂತ್ವನ ಹೇಳಲು ಶುಕ್ರವಾರ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರಕ್ಕೆ ಭೇಟಿ ನೀಡಿದ್ದ ವೇಳೆ ದುಷ್ಕರ್ಮಿಗಳು ಕಲ್ಲು, ಮೊಟ್ಟೆಗಳಿಂದ ದಾಳಿ ನಡೆಸಿದ್ದರು.
ಅಲ್ಲದೇ, ಕಳ್ಳ ಕಳ್ಳ ಎಂದು ಘೋಷಣೆ ಕೂಗಿದ್ದರು. ಬಳಿಕ, ಅಭಿಷೇಕ್ ಅವರಿಗೆ ಹೆಲ್ಮೆಟ್ ಹಾಕಿದ ಭದ್ರತಾ ಸಿಬ್ಬಂದಿ ದುಷ್ಕರ್ಮಿಗಳಿಂದ ಪಾರು ಮಾಡಿದ್ದರು.
ಘಟನಾ ಪ್ರದೇಶದಲ್ಲಿನ ಸಿಸಿಟಿವಿ ವಿಡಿಯೊ ಆಧರಿಸಿ ರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಅಭಿಷೇಕ್ ಅವರನ್ನು ಒದೆಯುವ, ದೈಹಿಕ ಹಲ್ಲೆ ನಡೆಸುವ ಯತ್ನ ನಡೆಸಿದ್ದರು, ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶದಿಂದ ಅನಾಹುತ ತಪ್ಪಿದೆ ಎಂದು ವರದಿ ತಿಳಿಸಿದೆ.
ಈ ಕುರಿತಂತೆ ಅಭಿಷೇಕ್ ಬ್ಯಾನರ್ಜಿಯಾಗಲಿ, ಟಿಎಂಸಿಯಾಗಲಿ ಯಾವುದೇ ದೂರು ನೀಡದ ಕಾರಣ ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಮದು ಅವರು ಹೇಳಿದ್ದಾರೆ.
ಈ ದಾಳಿಯ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.

