''ನಾವು 'ಲಿಯಾಕಿ ಫ್ರೀಡಂ' ಹಡಗಿನ ಮಾಸ್ಟರ್( ಕ್ಯಾಪ್ಟನ್) ಜೊತೆ ಮಾತನಾಡಿದ್ದು,ಎಲ್ಲ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ'' ಎಂದು ವಿದೇಶಾಂಗ ಸಚಿವಾಲಯದ ವಕ್ತಾರರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಜಾಗತಿಕ ನಾವಿಕರ ಸಂಸ್ಥೆಯಾದ 'ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ' (ಎಫ್‌ಎಸ್‌ಯುಐ) ಕೂಡ ಹಡಗಿನ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಖಚಿತಪಡಿಸಿದೆ.
ಒಮನ್‌ನತ್ತ ಪ್ರಯಾಣಿಸುತ್ತಿರುವ ಲಿಯಾಕಿ ಫ್ರೀಡಂ ತೈಲ ಮತ್ತು ರಾಸಾಯನಿಕಗಳ ಸಾಗಾಟದ ಟ್ಯಾಂಕರ್ ಆಗಿದ್ದು, ಮಾರ್ಷಲ್ ಐಲ್ಯಾಂಡ್ಸ್ ಧ್ವಜವನ್ನು ಹೊತ್ತಿದೆ.
ಜೂನ್ 8 ರಿಂದೀಚೆಗೆ ಅಮೆರಿಕ ಸೇನೆಯು ಭಾರತೀಯ ಸಿಬ್ಬಂದಿಗಳಿದ್ದ ಮೂರು ನೌಕೆಗಳ ಮೇಲೆ ದಾಳಿ ನಡೆಸಿದೆ. ಜೂನ್ 10ರಂದು ನಡೆದಿದ್ದ ಎರಡನೇ ಘಟನೆಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಅದರ ಮರುದಿನವೇ ಮೂರನೇ ಹಡಗಿನ ಮೇಲೆ ದಾಳಿ ನಡೆದಿತ್ತು.
ಅಮೆರಿಕವು ಏಪ್ರಿಲ್ 13 ರಿಂದ ಇರಾನ್ ಮೇಲೆ ವಿಧಿಸಿರುವ ನೌಕಾ ದಿಗ್ಬಂಧನವನ್ನು ಉಲ್ಲಂಘಿಸಲು ಈ ನೌಕೆಗಳು ಯತ್ನಿಸುತ್ತಿದ್ದಾಗ ಇವುಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಯುಎಸ್ ಮಿಲಿಟರಿ ಪ್ರತಿಪಾದಿಸಿದೆ.
ವಿದೇಶಾಂಗ ಸಚಿವಾಲಯವು ಈಗಾಗಲೇ ದಿಲ್ಲಿಯಲ್ಲಿರುವ ಅಮೆರಿಕದ ರಾಯಭಾರಿ ಜೇಸನ್ ಮೀಕ್ಸ್ ಅವರನ್ನು ಎರಡು ಸಲ ಕರೆಸಿಕೊಂಡು ಭಾರತೀಯ ಸಿಬ್ಬಂದಿಗಳಿದ್ದ ಟ್ಯಾಂಕರ್‌ಗಳ ಮೇಲೆ ದಾಳಿಗಳ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೂ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ಅವರೊಂದಿಗೆ ಮಾತನಾಡಿ, ಭಾರತೀಯ ನಾವಿಕರ ಸಾವುಗಳ ಬಗ್ಗೆ ಭಾರತದ ತೀವ್ರ ಪ್ರತಿಭಟನೆಯನ್ನು ಪುನರುಚ್ಚರಿಸಿದ್ದಾರೆ.

