ಚೆನ್ನೈ: ತಮಿಳುನಾಡು ಹಣಕಾಸು ಸಚಿವೆ ಮೇರಿ ವಿಲ್ಸನ್ ಮಂಗಳವಾರ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಶ್ವೇತಪತ್ರವು ಹಿಂದಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರವನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದೆ.
ಸಚಿವಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಲ್ಸನ್, ತಮಿಳುನಾಡು 10 ಲಕ್ಷ ಕೋಟಿ ರೂಪಾಯಿಗಳ ನೇರ ಸಾಲದ ಹೊರೆ ಮತ್ತು 78,324 ಕೋಟಿ ರೂಪಾಯಿಗಳ ಕಂದಾಯ ಕೊರತೆಯನ್ನು ಹೊಂದಿದೆ ಎಂದು ಹೇಳಿದರು. ''ಇದು ಇದುವರೆಗೆ ಕಾಣದ ನೂತನ ಗರಿಷ್ಠ ಮಟ್ಟವಾಗಿದೆ'' ಎಂದು ಅವರು ಹೇಳಿದರು.
ಆರ್ಥಿಕತೆಯ ಪ್ರಮುಖ ಮಾನದಂಡಗಳಾದ ರಾಜ್ಯದ ಸ್ವಂತ ತೆರಿಗೆ ಆದಾಯ (ಎಸ್‌ಒಟಿಆರ್) ಮತ್ತು ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿಎಸ್ಡಿಪಿ)ವು ಶೇಕಡಾ 5.45 ರಷ್ಟಿದ್ದು, ಇದು ಅತ್ಯಂತ ಕಡಿಮೆ ಮಟ್ಟದಲ್ಲಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಟಿವಿಕೆ ಸಂಸ್ಥಾಪಕ ನಾಯಕ ಸಿ. ಜೋಸೆಫ್ ವಿಜಯ್, ತನ್ನ ಸರಕಾರವು ರಾಜ್ಯದ ಹಣಕಾಸು ಪರಿಸ್ಥಿತಿಯ ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು.

