HEALTH TIPS

ಬಂಡವಾಳ ಸೆಳೆಯಲು ಮತ್ತಷ್ಟು ಕ್ರಮ: ನಿರ್ಮಲಾ ಸೀತಾರಾಮನ್

 ನವದೆಹಲಿ (PTI): 'ವಿದೇಶಿ ಬಂಡವಾಳವನ್ನು (ಎಫ್‌ಡಿಐ) ಪುನಃ ಆಕರ್ಷಿಸಲು ಸರ್ಕಾರ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಘೋಷಿಸಿರುವ ಕ್ರಮಗಳು 'ಮೊದಲ ಹೆಜ್ಜೆ' ಮಾತ್ರ, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮಗಳ ಘೋಷಣೆ ಸಾಧ್ಯತೆ ಇದೆ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 


'ಪ್ರಮುಖ ಕಚ್ಚಾ ವಸ್ತುಗಳು, ಕಚ್ಚಾ ತೈಲ ಮತ್ತು ರಸಗೊಬ್ಬರ ಆಮದಿನ ಕಾರಣದಿಂದಾಗಿ ದೇಶದ ಅರ್ಥವ್ಯವಸ್ಥೆಯು ತೀವ್ರ ಸ್ವರೂಪದ ಒತ್ತಡವನ್ನು ಎದುರಿಸುತ್ತಿದೆ, ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯಿಂದಾಗಿ ಎದುರಾಗುವ ಸಂಕಷ್ಟಗಳನ್ನು ಎದುರಿಸಲು ಸಿದ್ಧವಾಗಿ ಇರಬೇಕಿದೆ' ಎಂದು ಅವರು ಹೇಳಿದ್ದಾರೆ.

ಸಾಲಪತ್ರಗಳ ಮಾರುಕಟ್ಟೆಯು ವಿದೇಶಿ ಬಂಡವಾಳವನ್ನು ಸೆಳೆಯಲು ಸೂಜಿಗಲ್ಲಿನಂತೆ ನೆರವಾಗಬಹುದು ಎಂಬುದನ್ನು ಸರ್ಕಾರ ಹಾಗೂ ಆರ್‌ಬಿಐ ನಡೆಸಿದ ವಿಶ್ಲೇಷಣೆಯೊಂದು ತೋರಿಸಿಕೊಟ್ಟಿದೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಸರ್ಕಾರದ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲು ಇರುವ ನಿಯಮಗಳ ಪಾಲನೆಯನ್ನು ಹಗುರವಾಗಿಸುವ ಉದ್ದೇಶದಿಂದ, ಅಮಿತ ಹೂಡಿಕೆಗೆ ಲಭ್ಯವಿರುವ ಸರ್ಕಾರಿ ಸಾಲಪತ್ರಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಜೂನ್‌ 5ರಂದು ವಿಸ್ತರಿಸಿದೆ.

ಅಲ್ಲದೆ, ವಿದೇಶಿ ಹೂಡಿಕೆದಾರರು ಸರ್ಕಾರಿ ಸಾಲಪತ್ರಗಳಲ್ಲಿನ ಹೂಡಿಕೆಯಿಂದ ಪಡೆಯುವ ಬಡ್ಡಿ ಹಾಗೂ ಬಂಡವಾಳ ವೃದ್ಧಿ ಲಾಭಕ್ಕೆ ಆದಾಯ ತೆರಿಗೆ ವಿನಾಯಿತಿಗಳನ್ನು ಘೋಷಿಸಲಾಗಿದೆ.

'ಈಗಿನ ಕ್ರಮಗಳು ಸಾಲಪತ್ರಗಳ ಮಾರುಕಟ್ಟೆಗೆ ಸೀಮಿತವಾಗಿ ಇವೆಯಾದರೂ, ಇಷ್ಟಕ್ಕೇ ಎಲ್ಲವೂ ಕೊನೆಗೊಳ್ಳುವುದಿಲ್ಲ. ಇನ್ನೂ ಹಲವು ಕ್ರಮಗಳು ಬರಲಿವೆ. ಇನ್ನಷ್ಟು ವಿದೇಶಿ ಬಂಡವಾಳ ಬರಬೇಕು' ಎಂದಿದ್ದಾರೆ.

ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಲು ಹಾಗೂ ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ತರಲು ನೆರವಾಗುವ ಇನ್ನೂ ಹಲವು ಕ್ರಮಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ಈಚೆಗೆ ಹೇಳಿದ್ದವು.

ಷೇರುಪೇಟೆಯಲ್ಲಿ ಕೂಡ ವಿದೇಶಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ, ಬಂಡವಾಳವನ್ನು ಹಿಂಪಡೆಯುವುದಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ಜೂನ್ ತಿಂಗಳ ಮೊದಲ ಪಾಕ್ಷಿಕದಲ್ಲಿ ವಿದೇಶಿ ಹೂಡಿಕೆದಾರರು ಷೇರುಪೇಟೆಯಿಂದ ಒಟ್ಟು ₹62,853 ಕೋಟಿ ಬಂಡವಾಳ ಹಿಂಪಡೆದಿದ್ದಾರೆ.

2025ರಲ್ಲಿ ವಿದೇಶಿ ಹೂಡಿಕೆ ದಾರರು ಒಟ್ಟು ₹1.66 ಲಕ್ಷ ಕೋಟಿ ಯಷ್ಟು ಬಂಡವಾಳ ಹಿಂಪಡೆದಿದ್ದರು. ಆದರೆ, 2026ರಲ್ಲಿ ಜೂನ್‌ 14ರವರೆಗಿನಅಂಕಿ-ಅಂಶಗಳ ಪ್ರಕಾರ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ದೇಶದಿಂದ ಹಿಂಪಡೆದ ಬಂಡವಾಳದ ಮೊತ್ತ ₹2.87 ಲಕ್ಷ ಕೋಟಿಯಷ್ಟಾಗಿದೆ. 












ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries