ಪುಣೆ: ಕಳೆದ ವರ್ಷ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ವಿಮಾನದ ಸಬ್ಬಂದಿ ಸೇರಿ ಹಲವರು ಮೃತಪಟ್ಟಿದ್ದರು. ಮೃತಪಟ್ಟವರ ಕುಟುಂಬದ ನೋವು ಇನ್ನೂ ಕಡಿಮೆಯಾಗಿಲ್ಲ. ಅಪಘಾತದಲ್ಲಿ ಮೃತಪಟ್ಟ ವಿಮಾನದ ಸಿಬ್ಬಂದಿಯ ಕುಟುಂಬವೊಂದು ಈಗಲೂ ಅವರ ಮೊಬೈಲ್ ರೀಚಾರ್ಜ್ ಮಾಡಿಸಿ ವಾಟ್ಸ್‌ಆಯಪ್‌ಗೆ ಸಂದೇಶ ಕಳುಹಿಸುತ್ತಾ ಅವರ ಜ್ಞಾಪಕವನ್ನು ಜೀವಂತವಾಗಿರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಅವಘಡದಲ್ಲಿ ಮೃತಪಟ್ಟ 22 ವರ್ಷದ ಇರ್ಫಾನ್ ಶೇಖ್ ವಿಮಾನದಲ್ಲಿ ಕೆಲಸ ಮಾಡುತ್ತಿದ್ದರು. ಮಗನ ಸಾವಿನ ನೋವನ್ನು ಮರೆಯಲಾಗದ ಕುಟುಂಬ, ದೈನಂದಿನ ದಿನಚರಿಯನ್ನು ವಾಟ್ಸ್‌ಆಯಪ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಮಗನಿಗೆ ಮೆಸೇಜ್ ತಲುಪುತ್ತಿವೆ ಎಂಬ ಸುಳ್ಳು ನಂಬಿಕೆಯಲ್ಲೇ ಕುಟುಂಬ ದಿನಗಳನ್ನು ದೂಡುತ್ತಿದೆ.
ಪ್ರತಿ ತಿಂಗಳು ಮಗನ ಮೊಬೈಲನ್ನು ರೀಚಾರ್ಜ್ ಮಾಡಿಸಿ, ನಿರಂತರವಾಗಿ ಮೆಸೇಜ್ ಕಳುಹಿಸುತ್ತಿದ್ದೇವೆ ಎಂದು ಇರ್ಫಾನ್ ತಂದೆ ಸಮೀರ್ ಸೇಖ್ ಹೇಳಿದ್ದಾರೆ.
'ಅವಘಡ ಸಂಭವಿಸಿ ವರ್ಷ ಕಳೆದಿದೆ. ಅವನ ವಾಟ್ಸ್‌ಆಯಪ್‌ಗೆ ನಾವು ನಮ್ಮ ದಿನಚರಿಯನ್ನು ನಿತ್ಯ ಹಂಚಿಕೊಳ್ಳುತ್ತಿದ್ದೇವೆ. ಮೆಸೇಜ್‌ಗಳು ಆತನಿಗೆ ತಲುಪುತ್ತವೆ ಎಂದು ನಾವು ಭಾವಿಸುತ್ತೇವೆ' ಎಂದಿದ್ದಾರೆ.
ನನ್ನ ಮಗನ ದೇಹ ಸುಟ್ಟುಹೋಗಿದೆ ಎಂದು ಈಗಲೂ ನನಗೆ ನಂಬಲಾಗುತ್ತಿಲ್ಲ ಎಂದು ಅಮೀರ್ ಹೇಳಿದ್ದಾರೆ.
'ಅಪಘಾತದಲ್ಲಿ ನನ್ನ ಮಗನ ದೇಹ ಸೇರಿದಮತೆ ಎಲ್ಲರ ದೇಹ ಸುಟ್ಟುಹೋದವು ಎಂದು ನಮಗೆ ಹೇಳಿದ್ದರು. ನಾವು ಮರಣೋತ್ತರ ಕೊಠಡಿಗೆ ತೆರಳಿದಾಗ, ಅವನ ವಸ್ತುಗಳನ್ನು ಒಳಗೊಂಡ ಪೆಟ್ಟಿಗೆಯನ್ನು ನಮಗೆ ನೀಡಲಾಯಿತು. ಅವನ ಪ್ಯಾಂಟ್, ಶರ್ಟ್, ಬೆಲ್ಟ್, ಸಾಕ್ಸ್ ಮತ್ತು ಒಳ ಉಡುಪುಗಳು ಅದರಲ್ಲಿದ್ದವು. ಆದರೆ, ಅವ್ಯಾವೂ ಸುಟ್ಟುಹೋಗಿರಲಿಲ್ಲ. ಮರಣೋತ್ತರ ವರದಿಯಲ್ಲಿ ಮಗನ ದೇಹ ಸುಟ್ಟುಹೋಗಿದೆ ಎಂದು ಉಲ್ಲೇಖಿಸಲಾಗಿದೆ'ಎಂದಿದ್ದಾರೆ.
2025ರ ಜೂನ್ 12ರಂದು ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್ 787 ಏರ್ ಇಂಡಿಯಾ ವಿಮಾನವು ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಟೇಕಾಫ್ ಆದ ಕೆಲವೇ ಸಮಯದಲ್ಲಿ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಬಿದ್ದಿತ್ತು. ಒಬ್ಬ ವ್ಯಕ್ತಿ ಹೊರತುಪಡಿಸಿ ವಿಮಾನದಲ್ಲಿದ್ದ 242 ಮಂದಿ ಮತ್ತು ವಿಮಾನದ ಅಡಿ ಸಿಲುಕಿದ 19 ಮಂದಿ ಮೃತಪಟ್ಟಿದ್ದರು.

