ಕುಂಬಳೆ: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಸೋಮವಾರ ಬೆಳಗ್ಗೆ ಸುರಿದ ಮಳೆಗೆ ಕುಂಬಳೆ ಸನಿಹ ಕಂಚಿಕಟ್ಟೆ ಪ್ರದೇಶದಲ್ಲಿ ಮನೆಯೊಂದರ ಅಡಿಪಾಯಕ್ಕೆ ಹೊಂದಿಕೊಂಡಿರುವ ಗೋಡೆ ಕುಸಿದು ಬಿದ್ದ ಪರಿಣಾಮ ಮನೆ ಅಪಾಯದ ಭೀತಿಯನ್ನು ಎದುರಿಸುತ್ತಿದೆ. ಇದರಿಂದ ಮನೆಯಲ್ಲಿ ವಾಸಿಸುವ ಕುಟುಂಬ ಆತಂಕಕ್ಕೀಡಾಗಿದೆ. ಕುಂಬಳೆ ಕಂಚಿಕಟ್ಟೆ ದುರ್ಗಾಂಬ ರಸ್ತೆಯ ನಿವಾಸಿ, ಉರಗತಜ್ಞ ಸುರೇಶ್ ಕೆ.ವಿ ಎಂಬವರ ಮನೆ ಅಪಾಯ ಭೀತಿ ಎದುರಿಸುತ್ತಿದೆ.
ರಸ್ತೆ ಬದಿ ಎತ್ತರದಲ್ಲಿ ಮನೆಯಿದ್ದು ಅಡಿಪಾಯಕ್ಕೆ ಕೆಂಪುಕಲ್ಲು ಕಟ್ಟಿ ಗೋಡೆಯನ್ನು ನಿರ್ಮಿಸಲಾಗಿತ್ತು. ಮಳೆ ಬಿರುಸುಗೊಳ್ಳುತ್ತಿದ್ದಂತೆ ಗೋಡೆಯ ಕಲ್ಲುಗಳು ಕುಸಿದುಬಿದ್ದಿದೆ. ಇದರಿಂದ ಮನೆಯ ಗೋಡೆಯೂ ಬಿರುಕುಬಿಟ್ಟಿರುವುದಾಗಿ ಸುರೇಶ್ ತಿಳಿಸಿದ್ದಾರೆ.

