ನೋಟು ಅಮಾನ್ಯೀಕರಣ:
ಚಲಾವಣೆಯಲ್ಲಿದ್ದ ₹500, ₹1000 ಮುಖಬೆಲೆಯ ನೋಟುಗಳನ್ನು 2016ರಲ್ಲಿ ದಿಢೀರನೆ ಕೇಂದ್ರ ಸರ್ಕಾರ ಅಮಾನ್ಯಗೊಳಿಸಿದ್ದು ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಕಪ್ಪುಹಣ ಮತ್ತು ಭಯೋತ್ಪಾದನೆಗೆ ಲಗಾಮು ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತಾದರೂ, ಇದರಿಂದ ಸಣ್ಣ ಉದ್ಯಮಗಳು ನೆಲಕಚ್ಚಿದವು. ಸಾಮಾನ್ಯ ಜನರು ಬ್ಯಾಂಕುಗಳ ಮುಂದೆ ಸರದಿಯಲ್ಲಿ ನಿಲ್ಲುವಂತಾಯಿತು. ಕೇಂದ್ರದ ಈ ನಿರ್ಧಾರವನ್ನು ವಿರೋಧ ಪಕ್ಷಗಳು ಹಾಗೂ ಆರ್ಥಿಕ ತಜ್ಞರು ಟೀಕಿಸಿದ್ದರು.
ನೋಟು ಅಮಾನ್ಯೀಕರಣವು ನಕಲಿ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಹಾಕುವ, ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸುವುದನ್ನು ತಪ್ಪಿಸುವ, ತೆರಿಗೆ ವಂಚನೆಯನ್ನು ತಡೆಯುವ ಕಾರ್ಯತಂತ್ರದ ಭಾಗವಾಗಿತ್ತು. ನೋಟು ಅಮಾನ್ಯೀಕರಣದ ಬಳಿಕ ದೇಶದ ಆರ್ಥಿಕತೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಕೇಂದ್ರ ಪ್ರತಿಪಾದಿಸಿದೆ.
ಜಿಎಸ್‌ಟಿ ಅನುಷ್ಠಾನ:
ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತಂದಿದ್ದು 2017ರ ಜುಲೈ 1ರಂದು. ಜಿಎಸ್‌ಟಿ ಹಲವು ಸ್ತರಗಳ, ವಸ್ತು/ಸೇವೆ ಗ್ರಾಹಕರ ಕೈಸೇರುವ ಹಂತದಲ್ಲಿ ಪಾವತಿಸಬೇಕಾದ ಪರೋಕ್ಷ ತೆರಿಗೆ ಪದ್ಧತಿ. 'ಒಂದು ದೇಶ, ಒಂದು ತೆರಿಗೆ' ಎಂಬ ಪರಿಕಲ್ಪನೆಯ ಅಡಿಯಲ್ಲಿ ದೇಶೀಯವಾಗಿ ಮಾರಾಟವಾಗುವ ಸರಕು ಮತ್ತು ಸೇವೆಗಳ ಮೇಲೆ ಮೌಲ್ಯವರ್ಧಿತ ತೆರಿಗೆಯಾಗಿ ಜಿಎಸ್‌ಟಿಯನ್ನು ಜಾರಿಗೆ ತರಲಾಯಿತು. 2017ರ ಜುಲೈಗೂ ಮೊದಲು ಅಬಕಾರಿ ಸುಂಕ, ಸೇವಾ ಸುಂಕ ಮತ್ತು ವ್ಯಾಟ್ ಸೇರಿದಂತೆ ಹಲವು ರೀತಿಯ ಪರೋಕ್ಷ ತೆರಿಗೆಗಳು ಚಾಲ್ತಿಯಲ್ಲಿದ್ದವು. 17 ಬಗೆಯ ಸ್ಥಳೀಯ ತೆರಿಗೆಗಳು ಮತ್ತು 13 ಬಗೆಯ ಸೆಸ್‌ಗಳನ್ನು ಸೇರಿಸಿ, ಐದು ಸ್ಲ್ಯಾಬ್‌ಗಳ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.
ಹೊಸ ತೆರಿಗೆ ಪದ್ಧತಿಯಿಂದಾಗಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ತೆರಿಗೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಐದು ವರ್ಷಗಳಲ್ಲಿ ಜಿಎಸ್‌ಟಿ ಸಂಗ್ರಹ ದುಪ್ಪಟ್ಟಾಗಿದೆ. ಜಿಎಸ್‌ಟಿ ಅನುಷ್ಠಾನ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದ್ದರೆ, ಅನುಷ್ಠಾನ ಸಮರ್ಪಕವಾಗಿಲ್ಲ ಎಂದು ವಿರೋಧ ಪಕ್ಷಗಳು ದೂರುತ್ತಿವೆ.
ವಿರೋಧ ಪಕ್ಷಗಳ ಟೀಕೆ
ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆ ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂಬ ಟೀಕೆಯನ್ನು ಆರಂಭದಲ್ಲೇ ವಿರೋಧ ಪಕ್ಷಗಳು ಮಾಡಿದ್ದವು.
2016ರ ನವೆಂಬರ್‌ನಲ್ಲಿ ದೇಶದಲ್ಲಿ ನೋಟು ರದ್ದತಿ ಮಾಡಲಾಗಿತ್ತು. ಅದರಿಂದ ಜನರಲ್ಲಿ ಹಣದ ಕೊರತೆ ಉಂಟಾಗಿ, ಜನಜೀವನಕ್ಕೆ, ವ್ಯಾಪಾರ-ವಹಿವಾಟಿಗೆ ತೊಂದರೆ ಉಂಟಾಗಿತ್ತು. ಅದಾದ ಕೆಲವೇ ತಿಂಗಳಲ್ಲಿ, 2017ರ ಜುಲೈನಲ್ಲಿ ಜಿಎಸ್‌ಟಿ ಜಾರಿಗೆ ತರಲಾಗಿತ್ತು. ಆರಂಭದ ಗೊಂದಲಗಳು, ಹೊಸ ವ್ಯವಸ್ಥೆಗೆ ಸ್ಥಿತ್ಯಂತರಗೊಳ್ಳುವಾಗಿನ ಸಮಸ್ಯೆಗಳಿಂದ ಮತ್ತೊಮ್ಮೆ ವ್ಯಾಪಾರ-ವಹಿವಾಟು, ಉದ್ಯಮಗಳಿಗೆ ಪೆಟ್ಟು ಬಿದ್ದಿತ್ತು. ಇವೆರಡರಿಂದ ದೇಶದ ಆರ್ಥಿಕತೆ ಕುಸಿದಿದೆ ಎನ್ನುವ ವರದಿಗಳೂ ಬಂದವು.
ಜಿಎಸ್‌ಟಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಬೇಕು, ಪೆಟ್ರೋಲಿಯಂ ಉತ್ಪನ್ನಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎನ್ನುವ ಒತ್ತಾಯ ವಿವಿಧ ವಲಯಗಳಿಂದ ಕೇಳಿಬಂದ ಹಿನ್ನೆಲೆ, ಜಿಎಸ್‌ಟಿ ವ್ಯವಸ್ಥೆಯಲ್ಲಿ ಮತ್ತೊಂದು ಸುತ್ತಿನ ಬದಲಾವಣೆ (ಜಿಎಸ್‌ಟಿ 2.0) ತಂದಿದೆ. ಅದರಂತೆ ಜಿಎಸ್‌ಟಿ ಮಂಡಳಿಯು ದರ ಪರಿಷ್ಕರಣೆ ಮಾಡಿದ್ದು, ನಾಲ್ಕು ಹಂತದ ತೆರಿಗೆ, ಎರಡು ಹಂತಕ್ಕೆ ಇಳಿದಿದೆ.
ಆಳ ಅಗಲ | ಜಿಎಸ್‌ಟಿ: ಎಂಟು ವರ್ಷಗಳ ಏರಿಳಿತದ ಹಾದಿ2. ಕೃಷಿ ಕಾಯ್ದೆಗಳ ವಿವಾದರೈತರ ಪ್ರತಿಭಟನೆ:
2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಹೊಸ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ರೈತರು ದೇಶದಾದ್ಯಂತ ಪ್ರತಿಭಟನೆ ನಡೆಸಿದರು. ಮುಖ್ಯವಾಗಿ, ಪಂಜಾಬ್, ಹರಿಯಾಣ ಮತ್ತು ಉತ್ತರಪ‍್ರದೇಶದ ಪಶ್ಚಿಮ ಭಾಗದ ರೈತರು ದೆಹಲಿಯ ಮೂರು ಗಡಿಗಳಲ್ಲಿ ಬೀಡುಬಿಟ್ಟು ಪ್ರತಿಭಟಿಸಿದರು.
ಸುಮಾರು ಒಂದು ವರ್ಷದ ತೀವ್ರ ಹೋರಾಟದ ಬಳಿಕ, ಸರ್ಕಾರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿತು. ಕಾಯ್ದೆಗಳು ಅಂಗೀಕಾರವಾಗಿ 406 ದಿನಗಳ ಬಳಿಕ (2021ರ ನವೆಂಬರ್) ಈ ನಿರ್ಧಾರವನ್ನು ಪ್ರಧಾನಿ ಮೋದಿ ಪ್ರಕಟಿಸಿದ್ದರು.
ಈ ಕಾಯ್ದೆಗಳ ಸುತ್ತ ನಡೆದಿರುವ ವಿದ್ಯಮಾನಗಳು ಅಸಂಖ್ಯ. ಸರ್ಕಾರ ಮತ್ತು ಪ್ರತಿಭಟನೆ ನಡೆಸುತ್ತಿರುವ ರೈತರ ಮಧ್ಯೆ 11 ಸುತ್ತು ಮಾತುಕತೆ ನಡೆದಿದ್ದರೂ ಯಾವುದೇ ವಿಚಾರದಲ್ಲಿ ಸಹಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಜನವರಿ 22ರ ಬಳಿಕ ಮಾತುಕತೆ ನಡೆದಿಲ್ಲ. ಪ್ರತಿಭಟನೆ ಹಿಂದಕ್ಕೆ ಪಡೆಯದೆ ಮಾತುಕತೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2020ರ ಡಿಸೆಂಬರ್‌ನಲ್ಲಿಯೇ ಹೇಳಿದ್ದರು.
ಪ್ರತಿಭಟನಕಾರರನ್ನು ಖಲಿಸ್ತಾನಿಗಳು, ಭಯೋತ್ಪಾದಕರು, ದೇಶದ್ರೋಹಿಗಳು ಎಂದೆಲ್ಲ ಆಡಳಿತ ಪಕ್ಷದ ಹಲವು ಮುಖಂಡರು ಹಂಗಿಸಿದ್ದರು. ಪ್ರತಿಭಟನಕಾರರ ಮೇಲೆ ದೇಶದ ಹಲವೆಡೆ ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿದ್ದವು. ಈ ಕಾಯ್ದೆಗಳು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತವೆ ಎಂದು ರೈತರು ಆರೋಪಿಸಿದ್ದರು.
ಸಂಪಾದಕೀಯ Podcast: ಕೃಷಿ ಕಾಯ್ದೆ ಹಿಂಪಡೆಯುವ ಘೋಷಣೆ- ಚುನಾವಣೆ ದೃಷ್ಟಿಯ ನಿರ್ಧಾರ3. ಸಾಂವಿಧಾನಿಕ ಮತ್ತು ಪೌರತ್ವ ಕಾಯ್ದೆಗಳ ವಿವಾದವಿಶೇಷ ಸ್ಥಾನಮಾನ ರದ್ದು:
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 2019ರ ಆಗಸ್ಟ್ 5ರಂದು ರದ್ದುಪಡಿಸಿತು. ಹಾಗೆಯೇ, ರಾಜ್ಯವನ್ನು 'ಜಮ್ಮು ಮತ್ತು ಕಾಶ್ಮೀರ' ಹಾಗೂ 'ಲಡಾಖ್' ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.
ಈ ನಿರ್ಧಾರದ ಸಮಯದಲ್ಲಿ ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದು ಮತ್ತು ಸ್ಥಳೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಯಿತು.
ವಿಶೇಷ ಸ್ಥಾನಮಾನ ರದ್ದು ಕ್ರಮವು ಪ್ರಾದೇಶಿಕ ಸ್ವಾಯತ್ತತೆ ಮತ್ತು ಜನಸಂಖ್ಯೆಯ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಸಮರ್ಥನೆ ಏನು?
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯುವಾಗ ಯಾವುದೇ 'ಅಸಾಂವಿಧಾನಿಕ ಕ್ರಮ' ಅನುಸರಿಸಿಲ್ಲ ಎಂದಿರುವ ಕೇಂದ್ರ ಸರ್ಕಾರ, ಪ್ರಾದೇಶಿಕ ಅಭಿವೃದ್ಧಿಗೆ ಹಿಂದಿನ ಕಾನೂನು ಅಡ್ಡಿಪಡಿಸುತ್ತಿತ್ತು ಎಂದು ವಾದಿಸಿದೆ. ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಈ ಭಾಗದಲ್ಲಿ ಭಯೋತ್ಪಾದನೆ ಚಟುವಟಿಕೆ, ಕಲ್ಲು ತೂರಾಟ ಪ್ರಕರಣಗಳು, ಸೇನಾ ಸಿಬ್ಬಂದಿ ಸಾವಿನ ಪ್ರಕರಣಗಳು ಕಡಿಮೆಯಾಗಿವೆ ಎಂಬ ಸಮರ್ಥನೆಗಳನ್ನೂ ನೀಡಿದೆ.
ಸಿಎಎ (CAA - Citizenship Amendment Act):
ಪೌರತ್ವ ತಿದ್ದುಪಡಿ ಮಸೂದೆಗೆ 2019ರ ಡಿಸೆಂಬರ್ 11ರಂದು ಸಂಸತ್ ಅಂಗೀಕಾರ ನೀಡಿತ್ತು. ಮಾರನೆ ದಿನವೇ ರಾಷ್ಟ್ರಪತಿ ಅಂಕಿತ ಹಾಕಿದ್ದರು. 2014ರ ಡಿಸೆಂಬರ್ 31ಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವವನ್ನು ನೀಡಲು ಈ ಕಾಯ್ದೆ ಅನುವು ಮಾಡಿಕೊಟ್ಟಿದೆ ಎಂದು ಕೇಂದ್ರ ಹೇಳಿತ್ತು.
ಆದರೆ ಈ ಕಾಯ್ದೆಯು ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ಮುಂದಾಗಿದೆ ಮತ್ತು ಇದು ಸಂವಿಧಾನದ ಜಾತ್ಯತೀತ ತತ್ವಕ್ಕೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ದೇಶದ ಹಲವೆಡೆ (ಮುಖ್ಯವಾಗಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ) ತೀವ್ರ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದವು.
ಪ್ರತಿಪಕ್ಷಗಳ ವಿರೋಧ
ಪೌರತ್ವ (ತಿದ್ದುಪಡಿ) ಮಸೂದೆಯು ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖಿಸಿರುವ ಸಮಾನತೆಯ ನಿಯಮವನ್ನು ಉಲ್ಲಂಘಿಸುತ್ತದೆ ಎಂಬುದು ಪ್ರತಿಪಕ್ಷಗಳ ಆರೋಪ.ಪೌರತ್ವ ಸಾಂವಿಧಾನಿಕ ವಿಷಯ. ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಧರ್ಮದ ಆಧಾರದ ಮೇಲೆ ಪೌರತ್ವ ನೀಡಬಾರದು ಎನ್ನುವುದು ಇವರ ನಿಲುವು.ಕಾಂಗ್ರೆಸ್, ಟಿಎಂಸಿ, ಸಿಪಿಐ(ಎಂ) ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ.
ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ
ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ 'ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026', ಮಹಿಳಾ ಮೀಸಲು ಕಾನೂನಿಗೆ ತಿದ್ದುಪಡಿ ಮಾಡುವ ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026 ಹಾಗೂ 'ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ- 2026' ಅನ್ನು ಕೇಂದ್ರ ಸರ್ಕಾರ ಈ ಹಿಂದೆ ಮಂಡಿಸಿತ್ತು. ಈ ಪೈಕಿ, ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಸೋಲುಂಟಾಗಿತ್ತು.
ಈ ಸಂವಿಧಾನ ತಿದ್ದುಪಡಿ ಮಸೂದೆ ಬಗ್ಗೆ ವಿಪಕ್ಷಗಳ ನಾಯಕರು ಹಾಗೂ ದಕ್ಷಿಣದ ರಾಜ್ಯಗಳ ಜನಪ್ರತಿನಿಧಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಶೇ 33 ಮಹಿಳಾ ಕೋಟಾವನ್ನು ಜಾರಿಗೊಳಿಸಲು ಜನಸಂಖ್ಯೆಯನ್ನು ಆಧಾರವಾಗಿ ಪರಿಗಣಿಸುವ ಅಸ್ತಿತ್ವದಲ್ಲಿರುವ ನಿಬಂಧನೆಯಲ್ಲಿ ಯಾವುದೇ ಬದಲಾವಣೆಯನ್ನು ಈ ಮಸೂದೆ ಪ್ರಸ್ತಾಪಿಸುವುದಿಲ್ಲ. 2011ರ ಜನಗಣತಿಯ ಆಧಾರದಲ್ಲೇ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ವಿಪಕ್ಷಗಳ ಆರೋಪ ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ದಕ್ಷಿಣದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಳ ಆಗಲಿದೆ ಎಂದೂ ಸ್ಪಷ್ಟಪಡಿಸಿದೆ.
ರಫೇಲ್ ಯುದ್ಧ ವಿಮಾನ ಒಪ್ಪಂದ:
ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು ಸಾರ್ವಜನಿಕ ವಲಯದ ಎಚ್‌ಎಎಲ್ (HAL) ಸಂಸ್ಥೆಯನ್ನು ಹೊರಗಿಟ್ಟು ಖಾಸಗಿ ಕಂಪನಿಗೆ ಲಾಭ ಮಾಡಿಕೊಡಲಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಭಾರಿ ವಿವಾದ ಸೃಷ್ಟಿಸಿದವು. ಆದರೆ ಸುಪ್ರೀಂ ಕೋರ್ಟ್ ಈ ಒಪ್ಪಂದದ ತನಿಖೆಗೆ ಕೋರಿದ್ದ ಅರ್ಜಿಗಳನ್ನು ವಜಾಗೊಳಿಸಿತು.
ಅಗ್ನಿಪಥ ಯೋಜನೆ:
ಭಾರತೀಯ ಸೇನೆಯ ಮೂರೂ ಪಡೆಗಳ ಸೇವೆಗೆ ಯುವಜನರನ್ನು ಅಲ್ಪಾವಧಿಗೆ ನೇಮಕ ಮಾಡಿಕೊಳ್ಳುವ ಸಲುವಾಗಿ ಸರ್ಕಾರ 2022ರಲ್ಲಿ 'ಅಗ್ನಿಪಥ' ಯೋಜನೆಯನ್ನು ಜಾರಿಗೆ ತಂದಿತ್ತು. ಇದಕ್ಕೆ ದೇಶದ ಎಲ್ಲೆಡೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸೇನಾ ನೇಮಕಾತಿಯಲ್ಲಿ ಸರ್ಕಾರವು ಮಾಡಿರುವ ಬದಲಾವಣೆಯನ್ನು ವಿರೋಧಿಸಿ ಯುವಕರು ಪ್ರತಿಭಟನೆ ನಡೆಸಿ, ರೈಲುಗಳಿಗೆ ಬೆಂಕಿ ಹಚ್ಚಿದ್ದರು.
ಸೈನಿಕರಿಗೆ ದೊರೆಯುವ ಸವಲತ್ತುಗಳು ಹೊಸದಾಗಿ ಸೃಷ್ಟಿಸಲಾಗಿರುವ ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕವಾಗುವ 'ಅಗ್ನಿವೀರ'ರಿಗೆ ಲಭ್ಯ ಆಗುವುದಿಲ್ಲ ಎಂಬುದು ವಿರೋಧಕ್ಕೆ ಪ್ರಮುಖ ಕಾರಣವಾಗಿತ್ತು.
ಆಳ-ಅಗಲ| 'ಅಗ್ನಿಪಥ'ಕ್ಕೆ ವಿರೋಧವೇಕೆ?5. ಸಾಂಸ್ಥಿಕ ಮತ್ತು ಸಾಮಾಜಿಕ ವಿಚಾರಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ:
ಸಿಬಿಐ, ಇ.ಡಿ ಮತ್ತು ಐ.ಟಿನಂತಹ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಬಳಸಿ ಕೇವಲ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪ ನಿರಂತರವಾಗಿ ಕೇಳಿಬರುತ್ತಿದೆ.
ಕೋವಿಡ್-19 ನಿರ್ವಹಣೆ:
ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ಆಕ್ಸಿಜನ್ ಕೊರತೆ, ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಪಟ್ಟ ಕಷ್ಟಗಳು ಮತ್ತು ಲಸಿಕೆ ವಿತರಣೆಯ ಆರಂಭಿಕ ಗೊಂದಲಗಳ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.
ಮಣಿಪುರ ಹಿಂಸಾಚಾರ:
ಮಣಿಪುರದಲ್ಲಿ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನವನ್ನು ವಿರೋಧಿಸಿ ಬುಡಕಟ್ಟು ಸಮುದಾಯಗಳಾದ ಕುಕಿ-ನಾಗ ಸಮುದಾಯಗಳು ಮೇ 3ರಂದು ಚುರಾಚಾಂದ್‌ಪುರ ಜಿಲ್ಲೆಯ ತೋರಬಂಗ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಥಾ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರ ಬಹು ಬೇಗ ಇಂಫಾಲ ಕಣಿವೆಯ ಮೈತೇಯಿಗಳು ಮತ್ತು ಬೆಟ್ಟ ಪ್ರದೇಶಗಳಲ್ಲಿರುವ ಕುಕಿಗಳ ನಡುವಿನ ಜನಾಂಗೀಯ ಸಂಘರ್ಷವಾಗಿ ಬದಲಾಗಿತ್ತು. ಒಂದೂವರೆ ವರ್ಷದಿಂದ ಹಿಂಸಾಚಾರದಲ್ಲಿ ಕನಿಷ್ಠ 250 ಮಂದಿ ಸತ್ತಿದ್ದು, 60,000 ಮಂದಿ ನಿರಾಶ್ರಿತರಾಗಿದ್ದಾರೆ.
ಮಣಿಪುರದ ಜನಸಂಖ್ಯೆಯಲ್ಲಿ ಮೈತೇಯಿಗಳು ಶೇ 53ರಷ್ಟಿದ್ದು, ಅವರು ಹೆಚ್ಚಾಗಿ ಇಂಫಾಲ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಉಳಿದಂತೆ ಬುಡಕಟ್ಟು ಸಮುದಾಯಗಳಾದ ನಾಗಾಗಳು, ಕುಕಿಗಳು ಶೇ 40ರಷ್ಟಿದ್ದು, ಬೆಟ್ಟ ಪ್ರದೇಶಗಳಲ್ಲಿ ವಾಸ ಮಾಡುತ್ತಾರೆ. ಇವರ ಕ್ರಿಯೆ ಪ್ರತಿಕ್ರಿಯೆಯ ಹಿಂಸಾತ್ಮಕ ಸರಣಿಯಿಂದ ಮಣಿಪುರ ಅಗ್ನಿಕುಂಡವಾಗಿತ್ತು.
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ಮಣಿಪುರದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಹಿಂಸಾಚಾರ, ಬಿಜೆಪಿ ರಾಜ್ಯಗಳಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಅಕ್ರಮ ವಲಸಿಗರ ಸಮಸ್ಯೆ ಸಂಬಂಧಿಸಿ ಕೇಂದ್ರ ಸರ್ಕಾರದ ಕಾರ್ಯವೈಖರಿ ಕುರಿತು ವಿರೋಧ ಪಕ್ಷಗಳ ಮುಖಂಡರು ಪ್ರಶ್ನಿಸಿದ್ದರು.
ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ 175 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, 169 ಮಂದಿಯನ್ನು ಗುರುತಿಸಲಾಗಿದೆ ಎಂದು ತನಿಖಾ ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
ಈ ಎಲ್ಲಾ ವಿಚಾರಗಳು ಮೋದಿ ಸರ್ಕಾರದ 12 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದ ರಾಜಕೀಯ ಧ್ರುವೀಕರಣ ಮತ್ತು ಸಾರ್ವಜನಿಕ ಚರ್ಚೆಗಳಿಗೆ ಪ್ರಮುಖ ಕಾರಣಗಳಾಗಿವೆ.

