ನಾವು ದಾರಿಯನ್ನು ಹುಡುಕಲು ಮೊಬೈಲ್‌ನಲ್ಲಿ ಬಳಸುವ ಜಿಪಿಎಸ್ (GPS) ವ್ಯವಸ್ಥೆ ಇದ್ದಕ್ಕಿದ್ದಂತೆ ಕೈಕೊಟ್ಟರೆ ಅಥವಾ ವಿಮಾನಗಳ ಸಂಪರ್ಕ ಕಡಿತಗೊಂಡರೆ ಏನಾಗಬಹುದು? ಆ ಕ್ಷಣ ಇಡೀ ಜಗತ್ತೇ ಸ್ತಬ್ಧವಾಗಬಹುದು. ಇಂತಹ ಆತಂಕಕಾರಿ ಬದಲಾವಣೆಗೆ ಸೂರ್ಯನಿಂದ ಏಳುವ ಸೌರ ಬಿರುಗಾಳಿಗಳಿಂದ (Solar Storms) ಉಂಟಾಗುತ್ತದೆ.
ಆದರೆ, ಈ ಬಿರುಗಾಳಿಗಳು ಭೂಮಿಗೆ ಎಷ್ಟು ಹಾನಿಯನ್ನು ಮಾಡಬಹುದು ಎನ್ನುವುದು ಕೇವಲ ಅದರ ಶಕ್ತಿಯ ಮೇಲಷ್ಟೇ ಅಲ್ಲ; ಅದು ಭೂಮಿಯ ಯಾವ ಭಾಗಕ್ಕೆ, ಯಾವ ಸಮಯದಲ್ಲಿ ಅಪ್ಪಳಿಸುತ್ತದೆ ಎನ್ನುವುದರ ಮೇಲೂ ನಿರ್ಧಾರವಾಗುತ್ತದೆ, ಗೊತ್ತೇ? ಹೌದು, ಭಾರತೀಯ ವಿಜ್ಞಾನಿಗಳು ನಡೆಸಿರುವ ಹೊಸ ಸಂಶೋಧನೆಯೊಂದು ಬಾಹ್ಯಾಕಾಶ ಹವಾಮಾನದ ಈ ರಹಸ್ಯವನ್ನು ಬಯಲಿಗೆಳೆದಿದೆ.
ನಮ್ಮ ಬೆಂಗಳೂರಿನಲ್ಲಿರುವ ಇಸ್ರೊ ಸಂಸ್ಥೆಯಾಗಲಿ ಅಥವಾ ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳಾಗಲಿ, ಬಾಹ್ಯಾಕಾಶದ ಹವಾಮಾನದ ಮೇಲೆ ಸದಾ ಕಣ್ಣಿಟ್ಟಿರುತ್ತವೆ. ಇತ್ತೀಚೆಗೆ ಸಿಎಸ್‌ಐಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯ, ಅಕಾಡೆಮಿ ಆಫ್ ಸೈಂಟಿಫಿಕ್ ಅಂಡ್ ಇನ್ನೋವೇಟಿವ್ ರಿಸರ್ಚ್ ಮತ್ತು ತಮಿಳುನಾಡಿನ ಶಾಸ್ತ್ರ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಟ್ಟಾಗಿ ಈ ಅಧ್ಯಯನ ನಡೆಸಿದ್ದಾರೆ. ತಮಿಳುನಾಡಿನ ತಂಜಾವೂರಿನಲ್ಲಿ ವಿಶೇಷ ಜಿಪಿಎಸ್ ರಿಸೀವರ್ ಕೇಂದ್ರವನ್ನು ಸ್ಥಾಪಿಸಿ, 2023ರ ಮಾರ್ಚ್‌ನಿಂದ 2024ರ ಮೇ ಅವಧಿಯಲ್ಲಿ ಸಂಭವಿಸಿದ ಮೂರು ಭೀಕರ ಸೌರ ಬಿರುಗಾಳಿಗಳನ್ನು ಇವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಭಾರತದ ದಕ್ಷಿಣ ಭಾಗ, ಅಂದರೆ ನಮ್ಮ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪ್ರದೇಶಗಳು ಭೂಮಿಯ ಕಾಂತೀಯ ಸಮಭಾಜಕ ವೃತ್ತಕ್ಕೆ (Magnetic Equator) ಹತ್ತಿರವಾಗಿರುವುದರಿಂದ, ಬಾಹ್ಯಾಕಾಶದ ಈ ಬದಲಾವಣೆಗಳನ್ನು ಅಭ್ಯಸಿಸಲು ಇದು ಅತ್ಯಂತ ಸೂಕ್ತ ಜಾಗವಾಗಿತ್ತು.
ನಮ್ಮ ಭೂಮಿಯ ಮೇಲ್ಭಾಗದಲ್ಲಿ, ಎಂದರೆ ನೆಲದಿಂದ ಸುಮಾರು 60 ಕಿಲೋಮೀಟರ್‌ನಿಂದ ಹಿಡಿದು 1,000 ಕಿಲೋಮೀಟರ್ ಎತ್ತರದವರೆಗೆ 'ಅಯಾನು ಮಂಡಲ' (Ionosphere) ಎಂಬ ಅದೃಶ್ಯ ಪದರವಿದೆ. ಇದು ವಿದ್ಯುತ್ ಶಕ್ತಿಯನ್ನು ಹೊಂದಿರುವ ಕಣಗಳಿಂದ (ಪ್ಲಾಸ್ಮಾ) ಕೂಡಿದೆ. ನಾವು ಭೂಮಿಯಿಂದ ಕಳುಹಿಸುವ ರೇಡಿಯೋ ತರಂಗಗಳು ಮತ್ತು ಬಾಹ್ಯಾಕಾಶದ ಉಪಗ್ರಹಗಳು ಕಳುಹಿಸುವ ಜಿಪಿಎಸ್ ಸಂಕೇತಗಳು ಈ ಅಯಾನು ಮಂಡಲದ ಮೂಲಕವೇ ಹಾದುಹೋಗಬೇಕು. ಇದು ಒಂದು ರೀತಿ ನಮ್ಮ ಡಿಜಿಟಲ್ ಸಂಪರ್ಕಕ್ಕೆ ಹೆದ್ದಾರಿ ಇದ್ದಂತೆ. ಸೂರ್ಯನಲ್ಲಿ ಭಾರಿ ಸ್ಫೋಟಗಳಾಗಿ ಅಲ್ಲಿಂದ ಪ್ಲಾಸ್ಮಾದ ದಟ್ಟ ಮೋಡಗಳು (Coronal Mass Ejections) ತೀವ್ರ ವೇಗದಲ್ಲಿ ಭೂಮಿಯ ಕಡೆಗೆ ನುಗ್ಗಿ ಬಂದಾಗ, ಅವು ಭೂಮಿಯ ಕಾಂತೀಯ ರಕ್ಷಣಾ ಕವಚಕ್ಕೆ ಬಡಿದು ಆಕಾಶದಲ್ಲಿ ಭಾರಿ ವಿದ್ಯುತ್ ಪ್ರವಾಹವನ್ನು ಸೃಷ್ಟಿಸುತ್ತವೆ. ಇದನ್ನೇ ಭೂಕಾಂತೀಯ ಬಿರುಗಾಳಿ (Geomagnetic Storms) ಎನ್ನುತ್ತಾರೆ.
ವಿಜ್ಞಾನಿಗಳು ಕಂಡುಕೊಂಡಿರುವ ಪ್ರಕಾರ ಈ ಬಿರುಗಾಳಿ ಅಪ್ಪಳಿಸಿದಾಗ ಅಯಾನು ಮಂಡಲದಲ್ಲಿ ಎರಡು ವಿರುದ್ಧ ಶಕ್ತಿಗಳು ಜಿದ್ದಾಜಿದ್ದಿಗೆ ಇಳಿಯುತ್ತವೆ. ಮೊದಲನೆಯ ಶಕ್ತಿಯು ಭೂಮಿಯ ಸಮಭಾಜಕ ವೃತ್ತದ ಮೇಲಿರುವ ವಿದ್ಯುತ್ ಕಣಗಳನ್ನು ಕಾರಂಜಿಯಂತೆ ಮೇಲಕ್ಕೆ ಚಿಮ್ಮಿಸುತ್ತದೆ, ಇದರಿಂದ ಅಲ್ಲಿ ಕಣಗಳ ದಟ್ಟಣೆ ತಕ್ಷಣ ಹೆಚ್ಚಾಗುತ್ತದೆ. ಆದರೆ ಇದೇ ಸಮಯದಲ್ಲಿ, ವಾತಾವರಣದ ಉಷ್ಣತೆಯಿಂದಾಗಿ ಜಾಗತಿಕ ಮಾರುತದಂತಹ ಮತ್ತೊಂದು ಪರೋಕ್ಷಶಕ್ತಿ ಸೃಷ್ಟಿಯಾಗಿ, ಈ ಕಣಗಳನ್ನು ಕೆಳಮಟ್ಟಕ್ಕೆ ತಳ್ಳಿ ನಾಶಪಡಿಸುತ್ತದೆ. ಇದರಿಂದ ಕಣಗಳ ಸಂಖ್ಯೆ ದಿಢೀರನೆ ಕುಸಿದುಹೋಗುತ್ತದೆ. ಈ ಏರಿಳಿತಗಳನ್ನು ವಿಜ್ಞಾನಿಗಳು ಜಿಪಿಎಸ್ ಸಂಕೇತಗಳ ವೇಗದಲ್ಲಾಗುವ ಸೂಕ್ಷ್ಮ ಬದಲಾವಣೆಗಳನ್ನು ಲೆಕ್ಕಹಾಕಿ ಪತ್ತೆಹಚ್ಚಿದ್ದಾರೆ.
ಈ ಸಂಶೋಧನೆಯಲ್ಲಿ ಅತ್ಯಂತ ರೋಚಕ ಸಂಗತಿ ಎಂದರೆ ಸೌರ ಬಿರುಗಾಳಿಯ ತೀವ್ರತೆಗಿಂತಲೂ ಅದು ನಮಗೆ ತಟ್ಟುವ 'ಸಮಯ' ಎಷ್ಟು ಮುಖ್ಯ ಎನ್ನುವುದು ಸಾಬೀತಾಗಿರುವುದು. ಉದಾಹರಣೆಗೆ, ಮೇ 2024ರಲ್ಲಿ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಎನ್ನಲಾದ ಸೌರ ಬಿರುಗಾಳಿಯೊಂದು ಭೂಮಿಗೆ ಅಪ್ಪಳಿಸಿತ್ತು. ಅದು ನಮ್ಮ ಭಾಗದಲ್ಲಿ ಮಧ್ಯರಾತ್ರಿಯ ಅವಧಿಯಲ್ಲಿ ತಟ್ಟಿದ ಕಾರಣ, ಅಯಾನು ಮಂಡಲದ ಕಣಗಳ ದಟ್ಟಣೆಯಲ್ಲಿ ಅತ್ಯಂತ ವೇಗದ ಮತ್ತು ತಲ್ಲಣಗೊಳಿಸುವ ಏರಿಳಿತಗಳು ಕಂಡುಬಂದವು. ಅದೇ ಬಿರುಗಾಳಿ ಮಧ್ಯಾಹ್ನದ ಸಮಯದಲ್ಲಿ ಅಪ್ಪಳಿಸಿದರೆ ವಾತಾವರಣದಲ್ಲಿ ಇಷ್ಟು ತಲ್ಲಣವಾಗದೆ ಕೇವಲ ನಿಧಾನಗತಿಯ ಉಬ್ಬರವಿಳಿತ ಮಾತ್ರ ಕಂಡುಬರುತ್ತದೆ. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ಏಪ್ರಿಲ್ 2023ರಲ್ಲಿ ಸಂಭವಿಸಿದ ಸಾಮಾನ್ಯ ತೀವ್ರತೆಯ ಬಿರುಗಾಳಿಯೊಂದು ಸಂಜೆಯ ಸಮಯದಲ್ಲಿ ಅಪ್ಪಳಿಸಿದ ಕಾರಣ ನಮ್ಮ ವಾತಾವರಣದ ಕಣಗಳ ದಟ್ಟಣೆಯನ್ನು ಶೇ 78ಕ್ಕಿಂತಲೂ ಹೆಚ್ಚು ಕುಸಿಯುವಂತೆ ಮಾಡಿತ್ತು. ಅಂದರೆ, ಬಿರುಗಾಳಿ ಎಷ್ಟು ಶಕ್ತಿಯುತವಾಗಿದೆ ಎನ್ನುವುದಕ್ಕಿಂತ, ಅದು ಅಪ್ಪಳಿಸುವ ಹೊತ್ತಿಗೆ ಅಲ್ಲಿನ ಸ್ಥಳೀಯ ವಾತಾವರಣ ಹೇಗಿತ್ತು ಎನ್ನುವುದು ಮುಖ್ಯವಾಗುತ್ತದೆ.
ಭಾರತದ ಪರ್ಯಾಯ ದ್ವೀಪದ (ಹೆಚ್ಚಾಗಿ ದಕ್ಷಿಣ ಭಾರತದ) ವಾತಾವರಣದಲ್ಲಿ ಇಂತಹದ್ದೊಂದು ನೇರ ಮತ್ತು ತುಲನಾತ್ಮಕ ಅಧ್ಯಯನ ನಡೆಸಿರುವುದು ಇದೇ ಮೊದಲು. ಇದುವರೆಗೆ ಜಾಗತಿಕ ಮಟ್ಟದ ಸಾಮಾನ್ಯ ವರದಿಗಳಷ್ಟೇ ಲಭ್ಯವಿದ್ದವು. ಆದರೆ, ಈ ಅಧ್ಯಯನಕ್ಕೆ ಕೇವಲ ತಂಜಾವೂರಿನ ಒಂದು ವೀಕ್ಷಣಾ ಕೇಂದ್ರದ ಮಾಹಿತಿಯನ್ನು ಮಾತ್ರ ಬಳಸಿಕೊಳ್ಳಲಾಗಿರುವುದರಿಂದ, ಇಡೀ ಪ್ರಾದೇಶಿಕ ಹವಾಮಾನವನ್ನು ಸಂಪೂರ್ಣವಾಗಿ ಮುನ್ಸೂಚನೆ ನೀಡುವುದಕ್ಕೆ ಕೆಲವು ಮಿತಿಗಳಿವೆ. ಬಾಹ್ಯಾಕಾಶದ ಈ ಅಲೆಗಳ ಚಲನೆ ಅತ್ಯಂತ ಸಂಕೀರ್ಣವಾಗಿದ್ದು, ಜಾಗತಿಕವಾಗಿ ಇದರ ನಿಖರ ಮುನ್ಸೂಚನೆ ನೀಡುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿದೆ.
ಮುಂದಿನ ದಿನಗಳಲ್ಲಿ ಸೌರ ಬಿರುಗಾಳಿಗಳ ಮುನ್ಸೂಚನೆ ನೀಡುವ ಅತ್ಯಾಧುನಿಕ ಮಾಡೆಲ್‌ಗಳನ್ನು ನಿರ್ಮಿಸಲು ಮತ್ತು ಆ ಮೂಲಕ ನಮ್ಮ ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆಯನ್ನು ಸುರಕ್ಷಿತವಾಗಿಡಲು ಈ ಅಧ್ಯಯನ ದಾರಿದೀಪವಾಗಲಿದೆ.

