ಪ್ರತಿ ವರ್ಷ ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ಲಕ್ಷಾಂತರ ಜನರು ಪಾರ್ಕ್‌ಗಳಲ್ಲಿ, ಸ್ಟುಡಿಯೊಗಳು ಮತ್ತು ಲಿವಿಂಗ್ ರೂಮ್‌ಗಳಲ್ಲಿ ಯೋಗಾಭ್ಯಾಸ ಮಾಡುತ್ತಾರೆ.
ದೇಹವನ್ನು ಹಗುರಗೊಳಿಸುವುದು ಮತ್ತು ನಮ್ಯತೆಯನ್ನು (Flexibility) ಹೆಚ್ಚಿಸುವುದರಿಂದ ಹಿಡಿದು ಒತ್ತಡ ಪರಿಹಾರದವರೆಗೆ, ಉತ್ತಮ ನಿದ್ರೆಯಿಂದ ಹಿಡಿದು ದೀರ್ಘಕಾಲದ ನೋವು ನಿವಾರಣೆಯವರೆಗೆ ಯೋಗವು ಹತ್ತು ಹಲವು ಪ್ರಯೋಜನಗಳನ್ನು ನೀಡುತ್ತದೆ.
ಈ ಅದ್ಭುತ ಲಾಭಗಳಿಂದಾಗಿಯೇ, ಯೋಗ ಇಂದು ಅನೇಕರ ಜೀವನದ ಒಂದು ಅವಿಭಾಜ್ಯ ಹಾಗೂ ನಿಯಮಿತ ಭಾಗವಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಯೋಗದ ಜನಪ್ರಿಯತೆಯು ಜಾಗತಿಕ ಮಟ್ಟದಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ. ಯೋಗದ ಪ್ರಯೋಜನಗಳನ್ನು ವೈಜ್ಞಾನಿಕವಾಗಿ ಬೆಂಬಲಿಸುವ ಇತ್ತೀಚಿನ ಸಂಶೋಧನೆಗಳು ಈ ಜನಪ್ರಿಯತೆಗೆ ಪ್ರಮುಖ ಕಾರಣ. ಆದರೆ ಇದು ಕೇವಲ ಅರ್ಧ ಕಥೆಯಷ್ಟೇ!
ಏಕೆಂದರೆ, ಯೋಗವು ಸ್ವತಂತ್ರವಾಗಿ ಹುಟ್ಟಿಕೊಂಡ ಪದ್ಧತಿಯಲ್ಲ. ದೀರ್ಘಕಾಲದಿಂದಲೂ ಇದನ್ನು ಆಯುರ್ವೇದದ ಒಂದು ಪ್ರಮುಖ ಅಂಗವೆಂದೇ ಪರಿಗಣಿಸಲಾಗಿದೆ. ಸರಳವಾಗಿ ಹೇಳಬೇಕೆಂದರೆ, ಇವುಗಳನ್ನು ಆರೋಗ್ಯ ವಿಜ್ಞಾನದ 'ಅವಳಿ ವಿಜ್ಞಾನಗಳು' ಎಂದು ಕರೆಯಬಹುದು.
ಎರಡೂ ಪದ್ಧತಿಗಳು ಹುಟ್ಟಿಕೊಂಡಿದ್ದು ಹೇಗೆ?
'ಆಯುರ್' (ಜೀವನ) ಮತ್ತು 'ವೇದ' (ಜ್ಞಾನ) ಎಂಬ ಎರಡು ಸಂಸ್ಕೃತ ಪದಗಳು ಒಟ್ಟಿಗೆ ಸೇರಿ 'ಆಯುರ್ವೇದ' ಎಂದಾಗಿದೆ. ಅಂದರೆ 'ಜೀವನದ ಜ್ಞಾನ'. ಇನ್ನು 'ಯೋಗ' ಎಂಬ ಪದವು 'ಯುಜ್' (ಜೋಡಿಸುವುದು ಅಥವಾ ಒಂದುಗೂಡಿಸುವುದು) ಎಂಬ ಧಾತುವಿನಿಂದ ಬಂದಿದೆ. ಚಿಕಿತ್ಸಾ ಪದ್ಧತಿಯಾಗಿ ಆಯುರ್ವೇದವು ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಗಿಡಮೂಲಿಕೆಗಳ ಚಿಕಿತ್ಸೆ, ಆಹಾರದ ಬದಲಾವಣೆ ಮತ್ತು ವಿಶೇಷ ಥೆರಪಿಗಳನ್ನು ಒಳಗೊಂಡಿದೆ. ಯೋಗವು ಇದೇ ವ್ಯವಸ್ಥೆಯ ಒಂದು ಭಾಗವಾಗಿ, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಲು ಆಸನಗಳು ಮತ್ತು ಪ್ರಾಣಾಯಾಮಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.
ಈ ಎರಡೂ ಪದ್ಧತಿಗಳ ಅಂತಿಮ ಉದ್ದೇಶ ಒಂದೇ ಆಗಿದ್ದು, ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ದೇಹ ಮತ್ತು ಮನಸ್ಸನ್ನು ನಿರ್ಮಿಸಲು ಇವೆರಡೂ ಸಹಾಯ ಮಾಡುತ್ತವೆ. ಇವೆರಡನ್ನೂ ಬೆಸೆಯುವ ಮತ್ತೊಂದು ಮುಖ್ಯ ವಿಷಯವೆಂದರೆ ವಾತ, ಪಿತ್ತ ಮತ್ತು ಕಫ ಎಂಬ 'ತ್ರಿದೋಷಗಳ' ಪರಿಕಲ್ಪನೆ.
ಆಯುರ್ವೇದದ ಪ್ರಕಾರ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ಈ ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳ ಮೇಲೆಯೇ ನಿರ್ಧಾರವಾಗುತ್ತದೆ. ಇವುಗಳಲ್ಲಿ ಏರುಪೇರಾದಾಗ ಆರೋಗ್ಯ ಸಮಸ್ಯೆಗಳಾಗುತ್ತವೆ. ಇವು ಸಮತೋಲನದಲ್ಲಿದ್ದಾಗ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ನಿಯಮಿತ ಯೋಗಾಭ್ಯಾಸವು ದೇಹದಲ್ಲಿನ ಈ ದೋಷಗಳನ್ನು ಸರಿಪಡಿಸಲು ಮತ್ತು ಸಮತೋಲನಕ್ಕೆ ತರಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಯೋಗದಲ್ಲಿ ಪ್ರಾಣ ಮತ್ತು ಚಕ್ರದ ಪರಿಕಲ್ಪನೆ
ಯೋಗ ತಜ್ಞರ ಪ್ರಕಾರ, ದೇಹದ ಪ್ರಮುಖ ಚೇತನ ಅಥವಾ ಜೀವಶಕ್ತಿಯನ್ನು 'ಪ್ರಾಣ' (Vital Energy) ಎಂದು ಕರೆಯಲಾಗುತ್ತದೆ. ದೇಹದಾದ್ಯಂತ ಪ್ರಾಣಶಕ್ತಿಯು ಯಾವುದೇ ಅಡೆತಡೆಯಿಲ್ಲದೆ ಮುಕ್ತವಾಗಿ ಹರಿದಾಗ ಮಾತ್ರ ವ್ಯಕ್ತಿಯು ಸಂಪೂರ್ಣ ಆರೋಗ್ಯಶಾಲಿಯಾಗಿರಲು ಸಾಧ್ಯ.
ಯೋಗ ವಿಜ್ಞಾನವು ದೇಹದಲ್ಲಿರುವ ಏಳು 'ಚಕ್ರಗಳ' ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತದೆ. ಈ ಚಕ್ರಗಳು ದೇಹದಾದ್ಯಂತ ಪ್ರಾಣಶಕ್ತಿ ಹರಿಯುವ ಪ್ರಮುಖ ಕೇಂದ್ರಗಳಾಗಿವೆ. ಯೋಗಾಸನಗಳು ಈ ಚಕ್ರಗಳನ್ನು ಜಾಗೃತಗೊಳಿಸಿ, ಪ್ರಾಣದ ಹರಿವನ್ನು ಸಕ್ರಿಯಗೊಳಿಸಲು ಮತ್ತು ದೇಹದ ಸಮತೋಲನವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತವೆ.
ಮನಸ್ಸು ಮತ್ತು ದೇಹದ ಸಮತೋಲನಕ್ಕಾಗಿ ಯೋಗ
ಮನಸ್ಸು-ದೇಹದ ಪರಿಪೂರ್ಣ ಸಮತೋಲನವನ್ನು ಕಂಡುಕೊಳ್ಳಲು ಮತ್ತು ದೇಹದ ಶಕ್ತಿ ಮಾರ್ಗಗಳನ್ನು ಮುಕ್ತಗೊಳಿಸಲು, ಆಯುರ್ವೇದ ತತ್ವಗಳ ಆಧಾರದ ಮೇಲೆ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದರ ಜೊತೆಗೆ ಯೋಗಾಭ್ಯಾಸ ಮಾಡುವಂತೆ ತಜ್ಞರು ಸಲಹೆ ನೀಡುತ್ತಾರೆ.
ಯೋಗವು ಆಯುರ್ವೇದ ಚಿಕಿತ್ಸೆಗೆ ಅತ್ಯಗತ್ಯವಾದ ಮಾನಸಿಕ ಆಯಾಮವನ್ನು ನೀಡುತ್ತದೆ. ಏಕೆಂದರೆ ಕೇವಲ ದೈಹಿಕ ಸಮತೋಲನ ಮಾತ್ರ ಸಾಲದು, ಮಾನಸಿಕ ನೆಮ್ಮದಿಯೂ ಅಷ್ಟೇ ಮುಖ್ಯ. ನಿಧಾನ ಹಾಗೂ ಸ್ಥಿರವಾದ ಯೋಗಾಭ್ಯಾಸವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಯೋಗವು ಆಯುರ್ವೇದದ 'ದಿನಚರಿ' (ದೈನಂದಿನ ಕ್ರಮ), ಋತುಚರ್ಯೆ (ಋತುಮಾನಕ್ಕೆ ತಕ್ಕ ಬದಲಾವಣೆ) ಮತ್ತು ಸಾತ್ವಿಕ ಆಹಾರಕ್ರಮದ ಭಾಗವಾದಾಗ, ಅದು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ದೀರ್ಘಕಾಲ ಕಾಪಾಡುತ್ತದೆ.
ನಿಜವಾದ ಬದಲಾವಣೆಗಳು ನಿರಂತರ ದಿನಚರಿಯಿಂದ ಬರುತ್ತವೆ. ಪ್ರತಿದಿನ 30 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುವುದು, ಧ್ಯಾನ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದು, ನಿಯಮಿತ ಸಮಯಕ್ಕೆ ಆಹಾರ ಸೇವಿಸುವುದು, ಆಹಾರದಲ್ಲಿ ಗಿಡಮೂಲಿಕೆಗಳು ಮತ್ತು ಋತುಮಾನದ ಹಣ್ಣು-ತರಕಾರಿಗಳನ್ನು ಸೇರಿಸುವುದು, ಆಗೊಮ್ಮೆ ಈಗೊಮ್ಮೆ ಉಪವಾಸ ಮಾಡುವುದು, ಆಯಿಲ್ ಪುಲ್ಲಿಂಗ್ (ಗಂಡೂಷ ಕ್ರಿಯೆ) ಮತ್ತು ನಿಯಮಿತ ನಿದ್ರೆಯ ಸಮಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಬದಲಾವಣೆಯನ್ನು ತರಬಲ್ಲದು.
ನೆನಪಿಡಿ, ಆಯುರ್ವೇದ ಮತ್ತು ಯೋಗ ಯಾವುದೇ ಕಾಯಿಲೆಗೆ ತಕ್ಷಣಕ್ಕೆ ನೀಡುವ 'ಕ್ವಿಕ್ ಫಿಕ್ಸ್', ಅಂದರೆ ತ್ವರಿತ ಪರಿಹಾರಗಳಲ್ಲ. ಬದಲಿಗೆ, ಇವು ದೀರ್ಘಕಾಲದವರೆಗೆ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಯ್ದುಕೊಂಡು ಸುಖವಾಗಿ ಬಾಳಲು ಕಲಿಸುವ ಪರಿಪೂರ್ಣ ಜೀವನ ವಿಧಾನಗಳಾಗಿವೆ.
!['0ae9b9d81e1be7cb38cfb343c2248acfa4be5689f9d5eb69f471a37474608b64.webp' failed to upload. TransportError: Error code = 7, Path = /_/BloggerUi/data/batchexecute, Message = There was an error during the transport or processing of this request., HTTP status = 0, Unknown HTTP error (HTTP Status: 0) (XHR Error Code: 6) (XHR Error Message: ' [0]')](https://www.blogger.com/img/transparent.gif)

