ಭುವನೇಶ್ವರ: ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನಕ್ಸಲರ ಅಡಗುತಾಣದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮೇಂದ್ರ ಪ್ರಸಾದ್ ಮಾತನಾಡಿ, 'ಶರಣಾದ ನಕ್ಸಲರ ವಿಚಾರಣೆಯ ವೇಳೆ, ಪೊಲೀಸರು ಅವರ ಅಡಗುತಾಣದ ಬಗ್ಗೆ ಮಾಹಿತಿ ಪಡೆದು ಬುಧವಾರ ಗಂಗಾಪಾಡರ್, ಕೊಡಮಹಾ, ಪಜಿಮಹಾ, ತೆಂಗೆರಿ ಮತ್ತು ಬಲಿಮಹಾ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ' ಎಂದು ಹೇಳಿದ್ದಾರೆ.
ಈ ವೇಳೆ, ಒಂದು ಸ್ವಯಂ ಲೋಡಿಂಗ್ ರೈಫಲ್, ಒಂದು ಗ್ರೆನೇಡ್, ಗನ್‌ಗಳು ಮತ್ತು 30 ಎಲೆಕ್ಟ್ರಿಕ್ ಡಿಟೊನೇರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜೂನ್ 9ರಂದು ಕೂಡ ಭದ್ರತಾ ಪಡೆಯವರು ಇದೇ ರೀತಿಯ ಶೋಧ ಕಾರ್ಯ ನಡೆಸಿ ಒಡಿಶಾ-ಆಂಧ್ರ ಪ್ರದೇಶದ ಗಡಿಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.

