ನವದೆಹಲಿ: ಶಿಕ್ಷಕರ ನೇಮಕಕ್ಕೆ 'ಶಿಕ್ಷಕರ ಅರ್ಹತಾ ಪರೀಕ್ಷೆ'ಯನ್ನು (ಟಿಇಟಿ) 2010ರಲ್ಲಿ ಕಡ್ಡಾಯಗೊಳಿಸಲಾಗಿದ್ದು, ಅದಕ್ಕೂ ಮುನ್ನ ನೇಮಕಗೊಂಡಿರುವ ಶಿಕ್ಷಕರಿಗೆ ಕಾನೂನಿನ ರಕ್ಷಣೆ ಒದಗಿಸುವಂತೆ ಅಖಿಲ ಭಾರತೀಯ ಶೈಕ್ಷಣಿಕ ಮಹಾಸಂಘದ (ಎಬಿಆರ್‌ಎಸ್‌ಎಂ) ದೆಹಲಿ ಘಟಕ ಕೇಂದ್ರ ಸರ್ಕಾರವನ್ನು ಕೋರಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಇದೇ 18ರಂದು ಪತ್ರ ಬರೆಯಲಾಗುವುದು ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
ಸೇವಾನಿರತ ಶಿಕ್ಷಕರು ಟಿಇಟಿ ತೇರ್ಗಡೆಯಾಗುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಮೇ 29ರಂದು ಪುನರುಚ್ಚರಿಸಿತ್ತು. ಅಲ್ಲದೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೇವೆಯಲ್ಲಿ ಉಳಿಯಲು ಈ ಹಿಂದೆ ವಿಧಿಸಿದ್ದ ಗಡುವನ್ನು 2028ರ ಆಗಸ್ಟ್ 31ರವರೆಗೆ ವಿಸ್ತರಿಸಿತ್ತು.
ಸುಪ್ರೀಂ ಕೋರ್ಟ್‌ನ ಈ ಆದೇಶದ ನಂತರ ದೇಶದಾದ್ಯಂತ 25 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಆತಂಕಗೊಂಡಿದ್ದು, ಅನಿಶ್ಚಿತತೆ ಎದುರಿಸುತ್ತಿದ್ದಾರೆ ಎಂದು ಶಿಕ್ಷಕರ ಸಂಘ ಹೇಳಿದೆ.
ರಾಷ್ಟ್ರೀಯ ಶಿಕ್ಷಕರ ಶೈಕ್ಷಣಿಕ ಪರಿಷತ್ತು 2010ರ ಆಗಸ್ಟ್ 23ರಂದು ಶಿಕ್ಷಕರಿಗೆ ಟಿಇಟಿಯನ್ನು ಕಡ್ಡಾಯ ಅರ್ಹತೆಯಾಗಿ ಅಧಿಸೂಚನೆ ಹೊರಡಿಸಿತ್ತು. ಆದರೆ ಅದಕ್ಕೂ ಮುನ್ನ ದೇಶದ ವಿವಿಧ ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದ ನಿಯಮಗಳು ಮತ್ತು ಅರ್ಹತಾ ಮಾನದಂಡಗಳ ಅನ್ವಯ ಶಿಕ್ಷಕರ ಆಯ್ಕೆ ನಡೆದಿದೆ. ಹೀಗಾಗಿ ಈ ಶಿಕ್ಷಕರಿಗೆ ಸರ್ಕಾರ ಕಾನೂನಿನ ರಕ್ಷಣೆ ಒದಗಿಸಬೇಕು ಎಂದು ಅದು ಕೋರಿದೆ.

