ಮುಳ್ಳೇರಿಯ: ಬೆಳ್ಳೂರು ಸರಕಾರಿ ಶಾಲೆ ಹಾಗೂ ನಾಟೆಕಲ್ಲು ಪೇಟೆ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಭಾನುವಾರ ಇಬ್ಬರು ಅಪ್ರಾಪ್ತ ಬಾಲಕರು ಹಾಗೂ ಓರ್ವ ಹೊರ ರಾಜ್ಯದ ಕಾರ್ಮಿಕನ ಮೇಲೆ ನಾಯಿಯೊಂದು ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿದೆ.
ನಾಯಿ ಕಡಿತದಿಂದ ಗಾಯಗೊಂಡವರನ್ನು ತಕ್ಷಣವೇ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ. ದಾಳಿ ಮಾಡಿದ ನಾಯಿಗೆ ರೇಬಿಸ್ ತಗುಲಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಸ್ಥಳೀಯರು ಅದನ್ನು ಹೊಡೆದು ಸಾಯಿಸಿದ್ದಾರೆ.
ನಾಯಿ ಸಾಯುವ ಮುನ್ನ ಪರಿಸರದ ಇತರ ಹಲವು ಬೀದಿ ನಾಯಿಗಳಿಗೂ ಕಚ್ಚಿರುವುದು ಇಡೀ ಗ್ರಾಮಸ್ಥರಲ್ಲಿ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಶಾಲೆಗೆ ಆವರಣ ಗೋಡೆ ಇಲ್ಲದ ಕಾರಣ ರಸ್ತೆ ಬದಿಯ ಅಲೆಮಾರಿ ದನಕರುಗಳು ಮತ್ತು ಬೀದಿ ನಾಯಿಗಳು ಶಾಲೆಯ ಒಳಗೆ ಮುಕ್ತವಾಗಿ ಒಡಾಡುವುದು ಮಕ್ಕಳ ಸುರಕ್ಷತೆಯ ಮೇಲೆ ಪರಿಣಾಮ ಬೀರಿದೆ
ಸೋಮವಾರ ಶಾಲೆ ಪುನರಾರಂಭಗೊಳ್ಳಲಿದ್ದು ಬೆಳ್ಳೂರು ಸರಕಾರಿ ಶಾಲೆಯ ಮುಂಭಾಗದಲ್ಲೇ ಈ ಘಟನೆ ನಡೆದಿರುವುದರಿಂದ, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ತೀವ್ರ ಆತಂಕಗೊಂಡಿದ್ದಾರೆ.

