ನವದೆಹಲಿ: 10 ಮತ್ತು 12ನೇ ತರಗತಿಯ ಪರೀಕ್ಷೆಗಳ ವೆಚ್ಚ ಹಾಗೂ ಟೆಂಡರ್, ಖರೀದಿ ಪ್ರಕ್ರಿಯೆ ಸೇರಿದಂತೆ ಉತ್ತರ ಪತ್ರಿಕೆಗಳ ವಿವರಗಳಿಗೆ ಸಂಬಂಧಿಸಿದಂತೆ ಆರ್‌ಟಿಐ ಕಾಯ್ದೆಯಡಿ ನೀಡಬಹುದಾದ ಮಾಹಿತಿಯನ್ನು ಅಂಶವಾರು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಸೂಚಿಸಿದೆ.
ಆರ್‌ಟಿಐನಡಿ ಮಾಹಿತಿ ನೀಡಲು ನಿರಾಕರಿಸಿದ್ದ ಸಿಬಿಎಸ್‌ಇಗೆ ಪರಿಷ್ಕೃತ ಉತ್ತರ ನೀಡುವಂತೆ ಸಿಐಸಿ ನಿರ್ದೇಶನ ನೀಡಿದೆ.
ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ಪಡೆದ ಮಾಹಿತಿಯನ್ನು ಆರ್‌ಟಿಐ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಮರೆಮಾಚಬಹುದು. ಸೆಕ್ಷನ್ 8(1)(ಡಿ) ಅಡಿಯಲ್ಲಿ ಯಾವುದೇ ಮಾಹಿತಿಯನ್ನು ನಿರಾಕರಿಸುವುದಕ್ಕೆ ಸೂಕ್ತ ಸಮರ್ಥನೆ ನೀಡಬೇಕು ಎಂದು ಹೇಳಿದೆ.
2023-24 ಮತ್ತು 2024-25ರ ಅವಧಿಯಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಬಳಸಲಾದ ಉತ್ತರ ಪತ್ರಿಕೆಗಳ ವಿವರ ಕೋರಿ ವ್ಯಕ್ತಿಯೊಬ್ಬರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಕಾಗದದ ಗುಣಮಟ್ಟ, ಪುಟಗಳ ಸಂಖ್ಯೆ, ಗಾತ್ರ, ಖರೀದಿ ವೆಚ್ಚ, ಒಟ್ಟು ಖರ್ಚು, ಜಿಎಸ್‌ಟಿ ಪಾವತಿ ಮತ್ತು ಉತ್ತರ ಪತ್ರಿಕೆಗಳ ಖರೀದಿಗಾಗಿ ಟೆಂಡರ್ ಪ್ರಕ್ರಿಯೆಯ ವಿವರಗಳನ್ನು ಕೇಳಿದ್ದರು.
ಈ ಅರ್ಜಿಗೆ ಉತ್ತರ ನೀಡಿದ್ದ ಸಿಬಿಎಸ್‌ಸಿ, ಉತ್ತರ ಪತ್ರಿಕೆಗಳ ಕೆಲ ವಿಶೇಷಣಗಳನ್ನು ಮಾತ್ರ ಬಹಿರಂಗಪಡಿಸಿತ್ತು. ಆದರೆ, ಉತ್ತರ ಪತ್ರಿಕೆಗಳ ಖರೀದಿ ವೆಚ್ಚ, ಖರೀದಿಸಿದ ಒಟ್ಟು ಸಂಖ್ಯೆ ಮತ್ತು ಖರೀದಿಗೆ ತಗುಲಿದ ಒಟ್ಟು ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ನಿರಾಕರಿಸಿತ್ತು.

