ಅಹಮದಾಬಾದ್: ಅಹಮದಾಬಾದ್ ವಿಮಾನ ದುರಂತದಲ್ಲಿ ಗುಜರಾತಿ ಮತ್ತು ಬಾಲಿವುಡ್ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದ ಮಹೇಶ್ ಜಿರಾವಾಲಾ ಅವರು ನಿಧನರಾಗಿ ಜೂನ್ 12ಕ್ಕೆ ಒಂದು ವರ್ಷ ಆಗಲಿದೆ. ಮಗ ಮಹೇಶ್ ಸತ್ತ ಮೇಲೂ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾನೆ ಎಂದು ಅವರ ತಂದೆ ಕಣ್ಣೀರಿಟ್ಟಿದ್ದಾರೆ.
'ಕುಟುಂಬದ ಬದುಕನ್ನು ಹೊಸದಾಗಿ ಕಟ್ಟಿಕೊಡುತ್ತೇನೆ' ಎಂದು ಮಗ ನೀಡಿದ್ದ ಭರವಸೆಯನ್ನು ನೆನೆದ 62 ವರ್ಷದ ತಂದೆ ಗಿರಿಧರ ಭಾಯ್ ಕಲಾವಾಡಿಯಾ ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ.
ವಿಮಾನ ದುರಂತದ ಬಳಿಕ ಬಂದ ಪರಿಹಾರದ ಹಣದಲ್ಲಿ ಖರೀದಿಸಿದ ಎರಡು ಕೋಣೆಗಳ ಪುಟ್ಟ ಫ್ಲ್ಯಾಟ್ ಪೀಠೋಪಕರಣಗಳ ಮಧ್ಯೆ ಕುಳಿತಿರುವ ಆ ವಯಸ್ಸಾದ ತಂದೆ, 'ನನ್ನ ಮಗ ಸತ್ತ ಮೇಲೂ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾನೆ' ಎಂದು ಹೇಳುತ್ತಾರೆ.
ಪ್ರಸ್ತುತ ಗಿರಿಧರ ಭಾಯ್ ಅವರು ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ಪತ್ನಿ, ಕಿರಿಯ ಮಗ ಕಾರ್ತಿಕ್ ಮತ್ತು ಮೊಮ್ಮಗಳೊಂದಿಗೆ ವಾಸಿಸುತ್ತಿದ್ದಾರೆ. ಕಳೆದ ವರ್ಷ ಜೂನ್ 12ರಂದು ಸಂಭವಿಸಿದ ದುರಂತದ ಮೊದಲ ವರ್ಷದ ಸ್ಮರಣೆಯ ಮುನ್ನಾದಿನ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, 'ನಾವು ಬದುಕನ್ನು ಮತ್ತೆ ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಆದರೆ ಹೆತ್ತ ಕರಳು ಮಗನನ್ನು ಮರೆಯಲು ಹೇಗೆ ಸಾಧ್ಯ? ಪ್ರತೀ ಸಂಜೆ ಅವನು ಮನೆಗೆ ಬರುತ್ತಾನೆ ಎಂದೇ ನನಗನಿಸುತ್ತದೆ. ನನ್ನ ಹೃದಯ ಶಸ್ತ್ರಚಿಕಿತ್ಸೆಯ ನಂತರ ಮಹೇಶ್ ನನಗೆ ಚಿಂತಿಸಬೇಡ ಎಂದು ಧೈರ್ಯ ತುಂಬಿದ್ದ. ಕುಟುಂಬದ ಎಲ್ಲಾ ಸಾಲಗಳನ್ನು ನಾನು ತೀರಿಸಿ, ಸ್ವಂತ ಮನೆ ಖರೀದಿಸುವುದಾಗಿ ಭರವಸೆ ನೀಡಿದ್ದ. ಇಂದು ಅವನಿಂದಾಗಿಯೇ ನಾವು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೇವೆ. ನನ್ನ ಮಗ ಸತ್ತ ಮೇಲೂ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ' ಎಂದು ಭಾವುಕರಾದರು.
ಏರ್ ಇಂಡಿಯಾ ವಿಮಾನ ದುರಂತ
2025ರ ಜೂನ್ 12ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI -171 ಟೇಕ್ -ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರ ಪ್ರದೇಶದ ವೈದ್ಯಕೀಯ ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಘಟನೆಯಲ್ಲಿ ವಿಮಾನದಲ್ಲಿದ್ದ 241 ಜನ ಮತ್ತು ಹಾಸ್ಟೆಲ್‌ನಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದರು.
ಈ ಘಟನೆಯಲ್ಲಿ ಗುಜರಾತಿ ಹಾಡುಗಳು ಮತ್ತು ಆಲ್ಬಮ್‌ಗಳನ್ನು ರಚಿಸಿ, ನಿರ್ದೇಶಿಸುತ್ತಿದ್ದ 34 ವರ್ಷದ ಮಹೇಶ್ ಜಿರಾವಾಲಾ ಕೂಡ ನಿಧನರಾಗಿದ್ದರು. ಈ ದುರಂತಕ್ಕೂ ಕೇವಲ ಎರಡು ವಾರಗಳ ಮುನ್ನ ಮಹೇಶ್ ಅವರ ಗಿರಿಧರ ಭಾಯ್‌ಗೆ ಹೃದಯಾಘಾತವಾಗಿತ್ತು. 'ನಾನು ವಜ್ರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ಸರ್ಜರಿಯ ನಂತರ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆಗ ಮಹೇಶ್, ನೀನು ಇನ್ಮುಂದೆ ವಿಶ್ರಾಂತಿ ತಗೋ, ದೀಪಾವಳಿಯೊಳಗೆ ಸ್ವಂತ ಮನೆ ಖರೀದಿಸಿ ಕುಟುಂಬದ ಜವಾಬ್ದಾರಿ ಹೊರುತ್ತೇನೆ ಎಂದಿದ್ದ' ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಅಂದು ಆರು ಜನರಿದ್ದ ಈ ಕುಟುಂಬ ತೀವ್ರ ಸಾಲದ ಸುಳಿಗೆ ಸಿಲುಕಿ ನರೋಡಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಮಹೇಶ್ ಅವರ ಮರಣದ ನಂತರ ಏರ್ ಇಂಡಿಯಾ, ಟಾಟಾ ಗ್ರೂಪ್ ಮತ್ತು ಗುಜರಾತ್ ಸರ್ಕಾರದಿಂದ ಒಟ್ಟು ₹1.29 ಕೋಟಿ ಜಂಟಿ ಪರಿಹಾರ ಲಭಿಸಿತ್ತು. ಇದರಲ್ಲಿ ಮಹೇಶ್ ಪತ್ನಿ ಹೆಟಲ್ ಅವರಿಗೆ ₹54 ಲಕ್ಷ ನೀಡಲಾಗಿದ್ದು, ಅವರು ತವರು ಮನೆಗೆ ಮರಳಿದ್ದಾರೆ. ಮಹೇಶ್ ಮದುವೆಯಾದ ಕೇವಲ ಮೂರೇ ತಿಂಗಳಿಗೆ ಈ ದುರಂತ ನಡೆದಿತ್ತು.
ಉಳಿದ ಹಣದಿಂದ ಗಿರಿಧರ ಭಾಯ್ ಮೊದಲು ಸುಮಾರು ₹15 ಲಕ್ಷದಷ್ಟು ಸಾಲವನ್ನು ಮರುಪಾವತಿಸಿದ್ದಾರೆ. 'ನಂತರ ಮಗನ ಆಸೆಯಂತೆ ₹45 ಲಕ್ಷಕ್ಕೆ ಈ ಫ್ಲ್ಯಾಟ್ ಖರೀದಿಸಿದೆ. ₹10 ಲಕ್ಷವನ್ನು ಪೀಠೋಪಕರಣಗಳಿಗೆ ಹಾಗೂ ₹5 ಲಕ್ಷವನ್ನು ಮೊಮ್ಮಗಳ ಹೆಸರಿನಲ್ಲಿ ಇಟ್ಟಿದ್ದೇನೆ. ಈಗ ಆ ಹಣದಲ್ಲಿ ಏನೂ ಉಳಿದಿಲ್ಲ, ಆದರೆ ನನ್ನ ಮಗ ಕುಟುಂಬಕ್ಕೆ ಒಂದು ಗೌರವಯುತ ಬದುಕು ಕಲ್ಪಿಸಿಕೊಟ್ಟಿದ್ದಾನೆ ಎಂಬ ನೆಮ್ಮದಿ ನನಗಿದೆ' ಎಂದು ಅವರು ಹೇಳಿದರು.
ಸದ್ಯ ಗಿರಿಧರ ಭಾಯ್ ಅವರ ಕಿರಿಯ ಮಗ ಕಾರ್ತಿಕ್ ಅದೇ ವಸತಿ ಸಂಕೀರ್ಣದಲ್ಲಿ ಹೇರ್ ಕಟಿಂಗ್ ಸಲೂನ್ ಆರಂಭಿಸಿದ್ದು, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದಾರೆ. ಮಗನಿಗೆ ಶೀಘ್ರದಲ್ಲೇ ಮರುಮದುವೆ ಮಾಡಿ ಬದುಕನ್ನು ಮುಂದೆ ನಡೆಸುವ ಯೋಜನೆಯಲ್ಲಿದ್ದಾರೆ ಈ ವೃದ್ಧ ದಂಪತಿ.

