ನೀಸ್: 'ಭಾರತವು ಇನ್ನು ಮುಂದೆ ಕೇವಲ ಗ್ರಾಹಕನಲ್ಲ, ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ರಾಷ್ಟ್ರವಾಗಲಿದೆ' ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ ಜೊತೆಗೆ ಇಲ್ಲಿ ನಡೆದ 'ಭಾರತ್ ಇನ್ನೋವೇಟ್ಸ್' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೀನ್ಯತೆ ಹಾಗೂ ತಂತ್ರಜ್ಞಾನದ ಮೂಲಕ ಜಗತ್ತಿನ ಸುಸ್ಥಿರ ಭವಿಷ್ಯಕ್ಕಾಗಿ ಭಾರತವು ಪರಿಹಾರ ಒದಗಿಸಲಿದೆ' ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತದ ಪ್ರಮುಖ ಸ್ಟಾರ್ಟ್‌ಅಪ್ ಹಾಗೂ ಫ್ರಾನ್ಸ್ ಹಾಗೂ ಇತರೆ ರಾಷ್ಟ್ರಗಳ ಉದ್ಯಮಿಗಳು ಭಾಗಿಯಾಗಿದ್ದರು.
'ಭಾರತ್ ಇನ್ನೋವೇಟ್ಸ್' ಕಾರ್ಯಕ್ರಮವು ಜಾಗತಿಕ ನಾವೀನ್ಯತೆಯ ಮುಂದಿನ ಅಧ್ಯಾಯವನ್ನು ಭಾರತದೊಂದಿಗೆ ಕೈ ಜೋಡಿಸಲು ಮುಕ್ತ ಆಹ್ವಾನವಾಗಿದೆ. ಮಾನವೀಯತೆಗೆ ಪ್ರಯೋಜನವಾಗುವಂತಹ ಪರಿಹಾರಗಳನ್ನು ದೇಶದ ಯುವ ಸಂಶೋಧಕರು ಕಂಡುಹಿಡಿಯಲಿದ್ದಾರೆ' ಎಂದು ತಿಳಿಸಿದ್ದಾರೆ.
'ಉನ್ನತ ತಂತ್ರಜ್ಞಾನ, ರಕ್ಷಣೆ ಹಾಗೂ ಸಂಶೋಧನಾ ಕ್ಷೇತ್ರ ಸೇರಿದಂತೆ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿರುವುದನ್ನು ಪ್ರಸ್ತಾಪಿಸಿದ ಅವರು, ಭಾರತದಲ್ಲಿ ಸುಧಾರಣಾ ಎಕ್ಸ್‌ಪ್ರೆಸ್ ನಿಲ್ಲುವುದಿಲ್ಲ, ಅದು ನಿರಂತರವಾಗಿ ನಡೆಯಲಿದೆ' ಎಂದು ವಿವರಿಸಿದ್ದಾರೆ.

