ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಋತುಚಕ್ರದ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ 2019ರಲ್ಲಿ ನಡೆದಿದ್ದ ಘಟನೆಗಳ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರು ನೀಡಿದ್ದಾರೆನ್ನಲಾದ ಹೇಳಿಕೆಗಳು ಕೇರಳದಲ್ಲಿ ಸಂಚಲನ ಮೂಡಿಸಿವೆ.
ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ವಿವಾದವು ಮತ್ತೆ ಭುಗಿಲೆದ್ದಿದೆ.
ಪದ್ಮಕುಮಾರ್ ಅವರ ಆರೋಪಗಳನ್ನು ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ತಿರಸ್ಕರಿಸಿದ್ದಾರೆ.
'ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಇಬ್ಬರು ಮಹಿಳೆಯರು ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಿದ ದಿನದಂದು ನನ್ನನ್ನು ಮತ್ತು ಹಿರಿಯ ಪೊಲೀಸ್ ಅಧಿಕಾರಿ ಎಸ್. ಶ್ರೀಜಿತ್ ಅವರನ್ನು 'ಸನ್ನಿಧಾನ'ದಿಂದ ಉದ್ದೇಶಪೂರ್ವಕವಾಗಿ ದೂರವಿಡಲಾಗಿತ್ತು ಎಂದು ಪದ್ಮಕುಮಾರ್ ಅವರು ನಿಕಟವರ್ತಿಗಳಿಗೆ ತಿಳಿಸಿದ್ದಾರೆ' ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
'ಅಂದಿನ ಸರ್ಕಾರ ಹಾಗೂ ಸಿಪಿಎಂನಲ್ಲಿ ಪ್ರಭಾವ ಹೊಂದಿದ್ದ ವ್ಯಕ್ತಿಯೊಬ್ಬರು ಇದನ್ನು ಸಂಘಟಿಸಿದ್ದರು. ಆ ದಿನ ಶಬರಿಮಲೆಗೆ ಹೋಗುವುದನ್ನು ತಪ್ಪಿಸಿ ತಿರುವನಂತಪುರಕ್ಕೆ ತೆರಳುವಂತೆ ಸೂಚಿಸಲಾಗಿತ್ತು' ಎಂದು ಪದ್ಮಕುಮಾರ್ ಆರೋಪಿಸಿದ್ದಾರೆ.
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾದ ಬಳಿಕ, ಪಕ್ಷದಿಂದ ದೂರ ಉಳಿದಿರುವ ಮಾಜಿ ಶಾಸಕ ಪದ್ಮಕುಮಾರ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
'ಪದ್ಮಕುಮಾರ್ ಹೇಳಿರುವಂತೆ ಯಾವುದೇ ಘಟನೆ ನಡೆದಿಲ್ಲ. ಈ ವಿಷಯದ ಬಗ್ಗೆ ನನಗೆ ಮಾಹಿತಿಯೂ ಇಲ್ಲ. ಅವರನ್ನು ಶಬರಿಮಲೆಯಿಂದ ದೂರವಿರುವಂತೆ ಸೂಚಿಸುವ ಅಗತ್ಯವು ಮುಖ್ಯಮಂತ್ರಿ ಕಚೇರಿಗೆ ಇರಲಿಲ್ಲ' ಎಂದು ಪಿಣರಾಯಿ ವಿಜಯನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ಧಾರೆ.
'ಈ ವಿವಾದಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ಆತ್ಮಕಥೆಯನ್ನು ಪದ್ಮಕುಮಾರ್ ಬರೆಯುತ್ತಿದ್ದಾರೆ' ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯನ್, 'ಜನರು ಆತ್ಮಕಥೆ ಬರೆಯುವುದು ಹೊಸ ವಿಷಯವೂ ಅಲ್ಲ; ಅದರಲ್ಲಿ ವಿಶೇಷವೇನೂ ಇಲ್ಲ. ಅನೇಕರು ಆತ್ಮಕಥೆ ಬರೆಯುತ್ತಾರೆ. ಆದರೆ, ಅದು ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ' ಎಂದು ಹೇಳಿದ್ದಾರೆ.
ಎಂ.ವಿ. ಗೋವಿಂದನ್, ಸಿಪಿಎಂ ರಾಜ್ಯ ಕಾರ್ಯದರ್ಶಿಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ ಸಂಬಂಧ ಪದ್ಮಕುಮಾರ್ ಜೈಲಿಗೆ ಹೋಗಿ ಹೊರಬಂದ ನಂತರ ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ.

