ಹೈದರಾಬಾದ್: ಅಮಾನತುಗೊಂಡಿದ್ದ ಶಮೀರ್‌ಪೇಟೆಯ ತಹಶೀಲ್ದಾರ್, ಜಂಟಿ ಸಬ್-ರಿಜಿಸ್ಟ್ರಾರ್ ಟಿ ಸುಚರಿತ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ. ಈ ಶೋಧ ಕಾರ್ಯಾಚರಣೆ ವೇಳೆ ₹20 ಕೋಟಿ ಮೌಲ್ಯದ ಆಸ್ತಿ, ನಗದು, ಹಾಗೂ ದುಬಾರಿ ಬೆಲೆಯ ವಜ್ರಾಭರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಮೀರ್‌ಪೇಟೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಶುಕ್ರವಾರ (ಜೂನ್ 26) ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ.
ಹಿಮಾಯತ್‌ನಗರದಲ್ಲಿರುವ ಸುಚರಿತ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅವರ ಬೇನಾಮಿ ಆಸ್ತಿ ಪರಿಶೀಲನೆ ನಡೆಸಿದಾಗ ಆದಾಯ ಮಿತಿಗೂ ಅಧಿಕ ಆಸ್ತಿ ಹೊಂದಿರುವುದು ತಿಳಿದು ಬಂದಿದೆ.
ಈ ಸಂಬಂಧ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಶೋಧದ ವೇಳೆ ಸಿದ್ದಿಪೇಟೆ ಜಿಲ್ಲೆಯ ಡಮರಕುಂಟ ಗ್ರಾಮದಲ್ಲಿ ಎರಡು ಎಕರೆ 17 ಗುಂಟೆ ಕೃಷಿ ಭೂಮಿ, ನಗರದ ವಿವಿಧ ಸ್ಥಳಗಳಲ್ಲಿ ಮೂರು ಫ್ಲಾಟ್‌ಗಳು, ಕೀಸರಾ ಮತ್ತು ಖಾನಮೆಟ್‌ನಲ್ಲಿ ಎರಡು ಫ್ಲಾಟ್‌ಗಳಿರುವುದು ತಿಳಿದು ಬಂದಿದೆ. ಎರಡು ಕಾರುಗಳು, ₹1.2 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ ₹38 ಲಕ್ಷ ಬ್ಯಾಂಕ್ ಠೇವಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಅವರ ಹೆಸರಿನಲ್ಲಿರುವ 12 ಎಕರೆ ಕೃಷಿ ಭೂಮಿಯ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕರ್ತವ್ಯದ ವೇಳೆ ₹30 ಲಕ್ಷ ಲಂಚ ಪಡೆದ ಆರೋಪದ ಮೇಲೆ ಸುಚರಿತ ಅವರನ್ನು ಮೇ 26 ರಂದು ಬಂಧಿಸಲಾಗಿತ್ತು. ನಂತರ ಎಸ್‌ಪಿಇ ಹಾಗೂ ಎಸಿಬಿ ವಿಶೇಷ ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು. ಅಂದಿನಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

