ವಾಷಿಂಗ್ಟನ್: ಇರಾನ್ ಮೇಲಿನ ಇಸ್ರೇಲ್ ನ ಇತ್ತೀಚಿನ ದಾಳಿಗಳು ಅಮೆರಿಕ ಮತ್ತು ಇರಾನ್ ನಡುವಿನ ಸಂಭಾವ್ಯ ಶಾಂತಿ ಒಪ್ಪಂದದ ಪ್ರಯತ್ನಗಳನ್ನು ಸಂಕೀರ್ಣಗೊಳಿಸುವ ಸಾಧ್ಯತೆ ಇದೆ. ಈ ಬೆಳವಣಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜತಾಂತ್ರಿಕ ಪ್ರಯತ್ನಗಳಿಗೆ ಹೊಸ ಸವಾಲಾಗಿ ಪರಿಣಮಿಸಿದೆ ಎಂದು Aljazeera ವರದಿ ಮಾಡಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ನಿಯಂತ್ರಣದಲ್ಲೇ ಉಳಿಸಿಕೊಳ್ಳುವ ಆಶಯವನ್ನು ಟ್ರಂಪ್ ಹೊಂದಿದ್ದರು ಎನ್ನಲಾಗಿದೆ. 2024ರ ಎಪ್ರಿಲ್‌ನಲ್ಲಿ ಉಭಯ ದೇಶಗಳು ಪರಸ್ಪರ ದಾಳಿ ನಡೆಸಿದ ಬಳಿಕ ಕೆಲವೇ ದಿನಗಳಲ್ಲಿ ಉದ್ವಿಗ್ನತೆ ತಗ್ಗಿ, ಅದು ವ್ಯಾಪಕ ಯುದ್ಧವಾಗಿ ಪರಿವರ್ತನೆಯಾಗಿರಲಿಲ್ಲ. ಈ ಬಾರಿಯೂ ಪರಿಸ್ಥಿತಿ ಅದೇ ರೀತಿಯಲ್ಲಿ ಶಮನವಾಗಬಹುದು ಎಂಬ ನಿರೀಕ್ಷೆ ಅಮೆರಿಕದ ವಲಯಗಳಲ್ಲಿ ವ್ಯಕ್ತವಾಗಿತ್ತು.
ಆದರೆ, ಕಳೆದ ಕೆಲವು ಗಂಟೆಗಳ ಹಿಂದೆ financial timesಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ 'ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ' ಎಂದು ಹೇಳಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ಹೇಳಿಕೆಯ ಅರ್ಥವೇನು ಎಂಬುದರ ಕುರಿತು ರಾಜತಾಂತ್ರಿಕ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್ ಜತೆ ನಡೆಸಿದ ಸಂಭಾಷಣೆಯಲ್ಲಿ, ಅಮೆರಿಕ ಬಯಸುವ ಫಲಿತಾಂಶಗಳನ್ನು ಸಾಧಿಸುವ ಅಗತ್ಯವಿದ್ದರೂ ಇಸ್ರೇಲ್ ನ ರಾಜಕೀಯ ಪರಿಸ್ಥಿತಿಗಳು ಭಿನ್ನವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಸರ್ಕಾರವು ವಿವಿಧ ರಾಜಕೀಯ ಒತ್ತಡಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದು, ದೇಶದ ಜನರ ಬೆಂಬಲವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಅವರು ಸೂಚಿಸಿದ್ದಾರೆ.
ಇದೇ ವೇಳೆ, ಮುಂದಿನ ಕೆಲವು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದ ಅಥವಾ ಕನಿಷ್ಠ ಒಂದು ತಿಳುವಳಿಕೆ ಒಪ್ಪಂದ ಸಾಧ್ಯವಾಗಬಹುದು ಎಂದು ಟ್ರಂಪ್ ಇತ್ತೀಚೆಗೆ ಹೇಳಿದ್ದರು. ಎರಡೂ ದೇಶಗಳು ಮಧ್ಯವರ್ತಿಗಳ ಮೂಲಕ ದಾಖಲೆಗಳು ಮತ್ತು ಪ್ರಸ್ತಾವನೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದರಿಂದ ಒಪ್ಪಂದದ ಸಾಧ್ಯತೆಯ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ, ಇಸ್ರೇಲ್‌ನ ಇತ್ತೀಚಿನ ದಾಳಿಗಳು ಈ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದಾದ ಕಾರಣ, ಅಮೆರಿಕ-ಇರಾನ್ ಮಾತುಕತೆಗಳ ಭವಿಷ್ಯದ ಕುರಿತು ಅನಿಶ್ಚಿತತೆ ಹೆಚ್ಚಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳಿಗೆ ಈ ಬೆಳವಣಿಗೆ ಸವಾಲಾಗಿ ಪರಿಣಮಿಸಿದೆ.

