ಮಹಿಳೆಯರ ಸಾಗಾಟ ಪ್ರಕರಣಗಳಲ್ಲಿ ಯಾವ ಕಾನೂನುಗಳನ್ನು ಅನ್ವಯಿಸಬೇಕು ಎನ್ನುವುದು ಸಂತ್ರಸ್ತರ ವಯಸ್ಸು, ಅವರ ಸಾಗಾಣಿಕೆಗೆ ಬಳಸುವ ವಿಧಾನಗಳು ಮತ್ತು ಅವರ ಶೋಷಣೆಯ ಸ್ವರೂಪವನ್ನು ಅವಲಂಬಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನು ಒಳಗೊಂಡ ನ್ಯಾಯಪೀಠವೊಂದು ಹೇಳಿದೆ.
ಮಾನವ ಕಳ್ಳಸಾಗಾಣಿಕೆಯನ್ನು ತಡೆಯಲು ಮತ್ತು ವೇಶ್ಯಾವಾಟಿಕೆ ದಂಧೆಯ ಸಂತ್ರಸ್ತರನ್ನು ರಕ್ಷಿಸಲು ಸದೃಢ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಕೋರಿ ಸ್ವಯಂಸೇವಾ ಸಂಘಟನೆ ಪ್ರಜ್ವಲಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.
ಬಲವಂತ, ವಂಚನೆ ಅಥವಾ ಶೋಷಣೆಯನ್ನು ಒಳಗೊಂಡ ಪ್ರಕರಣಗಳಲ್ಲಿ, ಸಮರ್ಥನೆಗಾಗಿ ಸಂತ್ರಸ್ತರ ಒಪ್ಪಿಗೆಯನ್ನು ಬಳಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.
''ತನ್ನ ಸಾಗಾಣಿಕೆಗಾಗಿ ಮಗುವೊಂದು ಒಪ್ಪಿಗೆ ನೀಡಿದೆಯೇ ಇಲ್ಲವೇ ಎನ್ನುವುದು ಅಪ್ರಸ್ತುತ. ಸಾಗಾಣಿಕೆಯಲ್ಲಿ ಸರಿಯಾದ ಕಾನೂನು ಕ್ರಮಗಳನ್ನು ಪಾಲಿಸಲಾಗಿದೆಯೇ ಇಲ್ಲವೇ ಎನ್ನುವುದನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ'' ಎಂದು ಸುಪ್ರೀಂ ಕೋರ್ಟ್ ಹೇಳಿತು.

