ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಎದ್ದಿದ್ದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದಲ್ಲಿ ಮತ್ತೊಂದು ಬಂಡಾಯದ ಬೇಗುದಿ ಶುರುವಾಗಿದೆ.
ಲೋಕಸಭೆಯ ಒಂಬತ್ತು ಸಂಸದರ ಪೈಕಿ ಆರು ಸಂಸದರು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ.
ಈ ಬೆಳವಣಿಗೆ 2022ರಲ್ಲಿ ಶಿವಸೇನಾವನ್ನು ಇಬ್ಬಾಗ ಮಾಡಿದ್ದ ಶಿಂದೆ ನೇತೃತ್ವದ ಬಂಡಾಯದ ಕಹಿ ನೆನಪನ್ನು ಮರುಕಳಿಸಿದೆ.
ಈ ಆತಂಕದ ನಡುವೆಯೇ ಉದ್ಧವ್ ಬಣ ಗುರುವಾರ ಸಂಸದೀಯ ಮಂಡಳಿಯ ತುರ್ತು ಸಭೆ ಕರೆದಿತ್ತಾದರೂ, ಬಂಡಾಯದ ಮುನ್ಸೂಚನೆ ನೀಡಿರುವ ಆರು ಸಂಸದರು ಈ ಸಭೆಗೆ ಗೈರಾಗುವ ಮೂಲಕ ಉದ್ಧವ್‌ಗೆ ಬಿಗ್ ಶಾಕ್ ನೀಡಿದ್ದಾರೆ.
ಕೋಟಿ ಕೋಟಿ ಆಮಿಷದ ಆರೋಪ...
ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಬಣವು ನಮ್ಮ ಪಕ್ಷದ ಸಂಸದರನ್ನು ಸೆಳೆಯಲು ತಲಾ ₹ 15 ಕೋಟಿಯ ಆಮಿಷ ನೀಡಲಾಗಿದೆ ಎಂದು ಶಿವಸೇನೆ (ಯುಬಿಟಿ) ಹಿರಿಯ ನಾಯಕ ಸಂಜಯ್ ರಾವುತ್ ಗಂಭೀರ ಆರೋಪ ಮಾಡಿದ್ದಾರೆ.
ಆದರೆ, ಈ ಬಂಡಾಯದಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ ಎಂದು ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬಾವಂಕುಳೆ ಸ್ಪಷ್ಟಪಡಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ಸಂಸದರು ಎಲ್ಲಿಗೆ ಹೋಗುತ್ತಾರೆ ಎಂಬುದಕ್ಕೂ, ನಮಗೂ ಸಂಬಂಧವಿಲ್ಲ. ಸಂಸದರು ಯಾಕೆ ಪಕ್ಷ ಬಿಡುತ್ತಿದ್ದಾರೆ ಎಂಬುದನ್ನು ಠಾಕ್ರೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಿಂದೆಯಾಗಲಿ ಅಥವಾ ನಮ್ಮ ನಾಯಕರಾಗಲಿ ಭಾಗಿಯಾಗಿಲ್ಲ. ವಿನಾಕಾರಣ ಬಿಜೆಪಿಯನ್ನು ಎಳೆದು ತರುವುದು ಸರಿಯಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಶಿಂದೆ ಬಣ ಸೇರಲು ಸಜ್ಜಾಗಿರುವ 'ಆರು' ಸಂಸದರು ಯಾರು?
1. ಓಂರಾಜೆ ನಿಂಬಾಳ್ಕರ್
ಮರಾಠವಾಡದ ಪ್ರಭಾವಿ ನಾಯಕ ಓಂರಾಜೆ ನಿಂಬಾಳ್ಕರ್, ಕಾಂಗ್ರೆಸ್ ನಾಯಕ ದಿ. ಪವನರಾಜೆ ನಿಂಬಾಳ್ಕರ್ ಅವರ ಪುತ್ರ. ಧಾರಾಶಿವ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ. ಕಳೆದ ಭಾನುವಾರ 'ಮಾತೋಶ್ರೀ'ಯಲ್ಲಿ ನಡೆದ ಸಭೆಗೆ ಕೌಟುಂಬಿಕ ಕಾರಣ ನೀಡಿ ಗೈರಾಗಿದ್ದರು.
ತಂದೆಯ ಕೊಲೆ ಪ್ರಕರಣ ಸೇರಿದಂತೆ ರಾಜಕೀಯವಾಗಿ ಮುನ್ನೆಲೆಗೆ ಬರಲು ಆಡಳಿತ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
2. ಸಂಜಯ್ ದಿನಾ ಪಾಟೀಲ್
ಮುಂಬೈನ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದಿರುವ ಸಂಜಯ್ ದಿನಾ ಪಾಟೀಲ್ ಮುಂಬೈ ಈಶಾನ್ಯ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ. ಇವರ ತಂದೆ ದಿನಾ ಬಾಮಾ ಪಾಟೀಲ್ ಕಾರ್ಮಿಕ ಮುಖಂಡರು ಹಾಗೂ ಮಾಜಿ ಶಾಸಕರಾಗಿದ್ದರು. ಈ ಹಿಂದೆ ಎನ್‌ಸಿಪಿಯಲ್ಲಿದ್ದ ಸಂಜಯ್, 2019ರಲ್ಲಿ ಅವಿಭಜಿತ ಶಿವಸೇನೆ ಸೇರಿದ್ದರು. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಇವರು ಬಣ ಬದಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
3. ಸಂಜಯ್ ಜಾಧವ್
ಪರಭಣಿ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿರುವ ಸಂಜಯ್ ಜಾಧವ್, ಮರಾಠವಾಡ ಭಾಗದಲ್ಲಿ ಶಿವಸೇನೆಯ ಅತ್ಯಂತ ಪ್ರಭಾವಿ ಮುಖಂಡರು. ಉದ್ಧವ್ ಠಾಕ್ರೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು, ಕಳೆದ ಕೆಲವು ದಿನಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.
ಇತ್ತೀಚೆಗೆ ಪಕ್ಷದ ಸಭೆಗಳಲ್ಲಿ ಅವರು ಭಾಗವಹಿಸುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
4. ಸಂಜಯ್ ದೇಶ್‌ಮುಖ್
ವಿದರ್ಭ ಪ್ರದೇಶದ ಪ್ರಮುಖ ನಾಯಕರಾಗಿರುವ ಸಂಜಯ್ ದೇಶ್‌ಮುಖ್, ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1999 ರಿಂದ 2009 ರವರೆಗೆ ಎರಡು ಬಾರಿ ಪಕ್ಷೇತರ ಶಾಸಕರಾಗಿದ್ದ ಇವರು, 2002-2004 ರ ನಡುವೆ ಮಹಾರಾಷ್ಟ್ರದ ಕ್ರೀಡಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಕಳೆದ ಚುನಾವಣೆಯಲ್ಲಿ ಅವರು ಯವತ್ಮಾಲ್ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
5. ನಾಗೇಶ್ ಪಾಟೀಲ್ ಅಷ್ಟಿಕರ್
ನಾಂದೇಡ್ ಮತ್ತು ಹಿಂಗೋಲಿ ಭಾಗದಲ್ಲಿ ಬಲವಾದ ಹಿಡಿತ ಹೊಂದಿರುವ ನಾಗೇಶ್ ಪಾಟೀಲ್, ಮೊದಲ ಬಾರಿ ಹಿಂಗೋಲಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದಾರೆ. ಎಂ.ಕಾಂ ಪದವೀಧರರಾಗಿರುವ ಇವರು ಈ ಹಿಂದೆ ಶಾಸಕರಾಗಿಯೂ ಕೆಲಸ ಮಾಡಿದ್ದರು. ಉದ್ಧವ್ ಅವರ ನಿಷ್ಠಾವಂತರಾಗಿದ್ದ ನಾಗೇಶ್ ಪಾಟೀಲ್ ಕೂಡ ಇತ್ತೀಚಿನ ಸಭೆಗಳಿಂದ ಅಂತರ ಕಾಯ್ದುಕೊಂಡಿದ್ದರು.
6. ಸಾಹೇಬ್ ವಾಕಚೌರೆ
ಪರಿಶಿಷ್ಟ ಜಾತಿಗೆ ಮೀಸಲಾದ ಶಿರಡಿ ಕ್ಷೇತ್ರವನ್ನು ಪ್ರತಿನಿಧಿಸುವ ವಾಕಚೌರೆ ಎರಡು ಬಾರಿ ಸಂಸದರಾಗಿದ್ದಾರೆ. ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ಇವರು, ಈ ಹಿಂದೆಯೂ ಪಕ್ಷಾಂತರ ಮಾಡಿ ಸುದ್ದಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಪಕ್ಷದ ನಾಯಕತ್ವದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿರುವುದು ಇವರ ಬಂಡಾಯದ ನಡೆಗೆ ಪುಷ್ಟಿ ನೀಡಿದೆ.

