ವಾಷಿಂಗ್ಟನ್: ಲೆಬನಾನ್ ಮೇಲೆ ದಾಳಿ ನಡೆಸದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಮನವೊಲಿಸಿದ್ದು, ತಮ್ಮ ಪಡೆಗಳನ್ನು ಅವರು ಹಿಂತೆಗೆದುಕೊಂಡಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಅಮೆರಿಕದೊಂದಿಗೆ ಮಾತುಕತೆ ಕೊನೆಗೊಳಿಸುವುದಾಗಿ ಇರಾನ್ ಎಚ್ಚರಿಸಿತ್ತು.
ಇದರ ಬೆನ್ನಲ್ಲೇ ಮಂಗಳವಾರ ನೆತನ್ಯಾಹುಗೆ ದೂರವಾಣಿ ಕರೆ ಮಾಡಿದ್ದ ಟ್ರಂಪ್, ಬೈರೂತ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು.
'ನಿನಗೇನಾದರೂ ಹುಚ್ಚು ಹಿಡಿದಿದೆಯೇ? ನಾನು ಇಲ್ಲದಿದ್ದರೆ ನೀನು ಜೈಲಿನಲ್ಲಿರುತ್ತಿದ್ದೆ. ನಾನು ನಿನ್ನನ್ನು ಉಳಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ಇದರಿಂದಾಗಿ ಇಸ್ರೇಲ್‌ಗೆ ಕೆಟ್ಟ ಹೆಸರು ಬಂದಿದೆ' ಎಂದು ಟ್ರಂಪ್, ನೆತನ್ಯಾಹು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದರ ಬೆನ್ನಲ್ಲೇ, ಲೆಬನಾನ್‌ನಿಂದ ತಮ್ಮ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ನೆತನ್ಯಾಹು ತಿಳಿಸಿದ್ದರು.
ಈ ವಿಷಯವನ್ನು ಟ್ರುತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಟ್ರಂಪ್, 'ಪರಸ್ಪರ ದಾಳಿ ನಡೆಸುವುದನ್ನು ನಿಲ್ಲಿಸುವುದಾಗಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ಒಪ್ಪಿಕೊಂಡಿವೆ' ಎಂದು ತಿಳಿಸಿದ್ದಾರೆ.
'ನಾನು ಇಂದು ನೆತನ್ಯಾಹು ಅವರೊಂದಿಗೆ ಮಾತನಾಡಿದೆ. ಬೈರೂತ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸದಂತೆ ಅವರಿಗೆ ವಿನಂತಿಸಿದೆ. ಅವರು ತಮ್ಮ ಪಡೆಗಳನ್ನು ಹಿಂತೆಗೆದುಕೊಂಡಿದ್ದಾರೆ. ನೆತನ್ಯಾಹು ಅವರಿಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, 'ನಾನು ಹಿಜ್ಬುಲ್ಲಾ ಪ್ರತಿನಿಧಿಗಳೊಂದಿಗೂ ಮಾತನಾಡಿದ್ದೇನೆ. ಇಸ್ರೇಲ್ ಸೈನಿಕರ ಮೇಲೆ ಗುಂಡು ಹಾರಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದ್ದಾರೆ. ಅದೇ ರೀತಿ, ಇಸ್ರೇಲ್ ಕೂಡ ಅವರ ಮೇಲೆ ಗುಂಡು ಹಾರಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದೆ. ಇದು ಎಷ್ಟು ದಿನ ಮುಂದುವರಿಯುತ್ತದೆ ನೋಡೋಣ' ಎಂದು ಹೇಳಿದ್ದಾರೆ.

