ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮತ್ತು ದೇಶದ ಪ್ರಮುಖ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ನಡೆದ ಜೆಇಇ-ಅಡ್ವಾನ್ಸ್ಡ್-2026ರ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಐಐಟಿ ದೆಹಲಿ ವಲಯದ ಶುಭಂ ಕುಮಾರ್ 360ಕ್ಕೆ 330 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನ ಪಡೆದಿದ್ದಾರೆ.
ಪರೀಕ್ಷೆ ಬರೆದ 1,79,694 ಅಭ್ಯರ್ಥಿಗಳ ಪೈಕಿ 56,880 ಅಭ್ಯರ್ಥಿ ಗಳು ಅರ್ಹತೆ ಪಡೆದಿದ್ದಾರೆ. ಇವರಲ್ಲಿ 46,773 ಬಾಲಕರಾಗಿದ್ದರೆ, 10,107 ಬಾಲಕಿಯರು. ಒಬ್ಬ ತೃತೀಯ ಲಿಂಗಿ ಅಭ್ಯರ್ಥಿ ಪರೀಕ್ಷೆ ಬರೆದಿದ್ದರೂ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ನೋಂದಾಯಿಸಿದ್ದ 3,052 ಅಂಗವಿಕಲ ಅಭ್ಯರ್ಥಿಗಳ ಪೈಕಿ 887 ಮಂದಿ ಅರ್ಹತೆ ಪಡೆದಿದ್ದಾರೆ.
ಅಗ್ರಸ್ಥಾನ ಪಡೆದಿರುವ ಶುಭಂ ಅವರು ಬಿಹಾರದ ಗಯಾದವರು. 329 ಅಂಕಗಳನ್ನು ಪಡೆದಿರುವ ಕಬೀರ್ ಚಿಲ್ಲರ್ ಎರಡನೇ ಸ್ಥಾನ ಮತ್ತು 319 ಅಂಕಗಳನ್ನು ಪಡೆದಿರುವ ಜತಿನ್ ಚಾಹರ್ ಮೂರನೇ ಸ್ಥಾನ ಪಡೆದಿದ್ದಾರೆ.
'ಸಾಮಾಜಿಕ ಮಾಧ್ಯಮದಿಂದ ದೂರವಿದ್ದದ್ದು ನೆರವಾಯಿತು'
ಕೋಟಾ (ಪಿಟಿಐ): 'ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದದ್ದು ಮತ್ತು ಕೋಟಾಗೆ ಸಂಬಂಧಿಸಿದಂತೆ ಬರುತ್ತಿದ್ದ ನಕಾರಾತ್ಮಕ ಸುದ್ದಿಗಳತ್ತ ಲಕ್ಷ್ಯ ಕೊಡದೇ ಇದ್ದುದ್ದರಿಂದ ಜೆಇಇ- ಅಡ್ವಾನ್ಸ್ಡ್‌ನಲ್ಲಿ ಅಗ್ರಸ್ಥಾನ ಪಡೆಯಲು ಸಾಧ್ಯವಾಯಿತು' ಎಂದು ಬಿಹಾರದ ಗಯಾದ ಶುಭಂ ಕುಮಾರ್ ಪ್ರತಿಕ್ರಿಯಿಸಿದರು.

