ಕಾಸರಗೋಡು: ಕನ್ನಡಪರ ಹೋರಾಟ ಸಂಘಗಳ ಪ್ರತಿನಿಧಿಗಳಿಂದ ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ ಶಾಜಿ ಅವರನ್ನು ಕಾಸರಗೋಡಿನಲ್ಲಿ ಸೋಮವಾರ ಭೇಟಿಯಾಗಿ, ಮಲಯಾಳ ಭಾಷಾ ಮಸೂದೆಗೆ ಸೂಕ್ತ ತಿದ್ದುಪಡಿ ತರುವುದು ಸೇರಿದಂತೆ ಇತರ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲುಕಸರಗೋಡಿಗೆ ಆಘಮಿಸಿದ ಸಚಿವರನ್ನು ಕನ್ನಡದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭೇಟಿಯಾಗಿ ಈ ಮನವಿ ಸಲ್ಲಿಸಿದ್ದಾರೆ.
ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಘಟನೆ ಪದಾಧಿಕಾರಿಗಳು ಮನವರಿಕೆ ಮಾಡಿದರು. ಮನವಿಯಲ್ಲಿರುವ ವಿಷಯಗಳನ್ನು ಸಂಪೂರ್ಣ ಅವಲೋಕನ ನಡೆಸಿದ ಸಚಿವರು, ಈ ಬಗ್ಗೆ ಪದಾಧಿಕರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಸಂಬಂಧಪಟ್ಟ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅಗತ್ಯ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಚಿವ ಕೆ.ಎಂ ಶಾಜಿ ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ, ವಕೀಲ ಮುರಳಿದರ ಬಳ್ಳಕ್ಕುರಾಯ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್‍ನಾರಾಐಣ್ ತೊಟ್ಟತೋಡಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಸುಕೇಶ್, ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ, ಗಮಕ ಕಲಾ ಪರಿಷತ್ ಕೇರಳ ಘಟಕ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು. ಉದುಮ ಶಾಸಕ ಕೆ. ನೀಲಕಂಠನ್ ಅವರು ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿದರು.



