ನವದೆಹಲಿ: 'ಭಾರತೀಯ ನ್ಯಾಯಾಂಗವು 'ಮಧ್ಯಸ್ಥಿಕೆ'ಯನ್ನು ಬಲಿಷ್ಠವಾದ ವಿವಾದ ಪರಿಹಾರ ಕಾರ್ಯವಿಧಾನವಾಗಿ ಪ್ರೋತ್ಸಾಹಿಸುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹೇಳಿದರು.
ಬ್ರಿಟನ್‌ನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿ ಆಯೋಜಿಸಿದ 'ತಂತ್ರಜ್ಞಾನ ಮತ್ತು ಮಧ್ಯಸ್ಥಿಕೆ ಭವಿಷ್ಯ' ಕುರಿತ ಉನ್ನತ ಮಟ್ಟದ ಚರ್ಚೆಯಲ್ಲಿ ಅವರು ಮಾತನಾಡಿದರು.
'ಮಧ್ಯಸ್ಥಿಕೆಯನ್ನು ವಿವಾದ ಪರಿಹಾರದ ಪರ್ಯಾಯ ಆಯ್ಕೆಯಾಗಿ ಮಾತ್ರವಲ್ಲ, ಬಲವಾದ ಕಾರ್ಯವಿಧಾನವಾಗಿಯೇ ನ್ಯಾಯಾಂಗ ಪರಿಗಣಿಸುತ್ತದೆ' ಎಂದರು.
ಸುಪ್ರೀಂ ಕೋರ್ಟ್‌ನ ಕಾನೂನು ಸೇವೆಗಳ ಸಮಿತಿಯು (ಎಸ್‌ಸಿಎಲ್‌ಎಸ್‌ಸಿ) ತರಬೇತಿ ಪಡೆದ ಮಧ್ಯಸ್ಥಿಕೆದಾರರ ದೊಡ್ಡ ತಂಡವನ್ನೇ ರಚಿಸಿದೆ. ಭಾರತದಲ್ಲಿ ಪ್ರತಿ ನಗರದಲ್ಲಿ, ಪ್ರತಿ ಬೀದಿಯ ಜನರಿಗೂ 'ಮಧ್ಯಸ್ಥಿಕೆ'ಯ ಮಹತ್ವ ತಿಳಿದಿದೆ' ಎಂದು ಅವರು ಹೇಳಿದರು.
ಬ್ರಿಟನ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಲಾರ್ಡ್ ಹ್ಯಾಂಬ್ಲೆನ್ ಕ್ರೆಸಿ, ಇಂಗ್ಲೆಂಡ್ ಮತ್ತು ವೇಲ್ಸ್‌ನ ಬಾರ್ ಕೌನ್ಸಿಲ್ ಅಧ್ಯಕ್ಷ ಕ್ರಿಸ್ಟಿ ಬ್ರಿಮೆಲೊ, ಕಾನೂನು ಸಮಿತಿಯ ಉಪಾಧ್ಯಕ್ಷ ಬ್ರೆಟ್ ಡಿಕ್ಸನ್, ಸಿಜೆಐ ಸೂರ್ಯಕಾಂತ್ ಅವರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದರು.
ಲಂಡನ್‌ನಲ್ಲಿರುವ ಭಾರತದ ಹೈಕಮಿಷನರ್ ಕುಮಾರನ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಪ್ರೀಂ ಕೋರ್ಟ್‌ನ ಎಒಆರ್ ತನ್ವಿ ದುಬೆ, ಅಮೆರಿಕ ಮತ್ತು ಬ್ರಿಟನ್‌ನ ನ್ಯಾಯಾಂಗ ಮತ್ತು ಕಾನೂನು ಕ್ಷೇತ್ರದ ತಜ್ಞರು ಇದ್ದರು.
ಮಧ್ಯಸ್ಥಿಕೆ ಕಾಯ್ದೆ 2023 ಜಾರಿಗೆ ಬರುವ ಮೊದಲು ಕೂಡ ನ್ಯಾಯಾಲಗಳು ವ್ಯಾಜ್ಯ ಪರಿಹಾರಕ್ಕೆ ಮಧ್ಯಸ್ಥಿಕೆಯನ್ನು ಪ್ರೋತ್ಸಾಹಿಸುತ್ತಿದ್ದವು. ಕಾಯ್ದೆ ಜಾರಿಗೆ ಬಂದ ನಂತರ ಮಧ್ಯಸ್ಥಿಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದ ಸಿಜೆಐ, ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ 'ಮಧ್ಯಸ್ಥಿಕೆ ಕೇಂದ್ರ'ಗಳನ್ನು ತೆರೆಯುವ ಅಗತ್ಯದ ಬಗ್ಗೆಯೂ ಗಮನ ಸೆಳೆದರು.

