ಕಾಸರಗೋಡು: ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ಸ್ವಯಂಪ್ರೇರಿತ ರಕ್ತದಾನಿಗಳನ್ನು ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್, ಕಾಞಂಗಾಡು ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರ ಮತ್ತು ಕೇರಳ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯ ಟೆಲಿಮೆಡಿಸಿನ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 'ಮಾನವೀಯತೆಯ ಒಂದು ಹನಿ, ರಕ್ತದಾನ ಮಾಡಿ, ಒಂದು ಜೀವ ಉಳಿಸಿ' ಎಂಬ ಈ ವರ್ಷದ ರಕ್ತದಾನಿಗಳ ದಿನದ ಸಂದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಸಮಾರಂಭ ಉದ್ಘಾಟಿಸಿದರು. ಕಾಞಂಗಾಡ್ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಸಂತೋಷ್.ಬಿ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ. ಆರತಿ ರಂಜಿತ್ ದಿನದ ಸಂದೇಶ ನೀಡಿದರು.
ಕಾಞಂಗಾಡ್ ನಗರಸಭೆ ಆರೋಗ್ಯ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್ ಮುರಿಯನವಿ, ವಾರ್ಡ್ ಕೌನ್ಸಿಲರ್ ಎಂ.ಎ. ರೇಷ್ಮಾ, ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ರಾಗಿತ್ ಕೃಷ್ಣನ್, ಡಾ. ಬಿ. ಶಹರ್ಬಾನಾ,ಜಿಲ್ಲಾ ಆಸ್ಪತ್ರೆಯ ನಸಿರ್ಂಗ್ ಸೂಪರಿಂಟೆಂಡೆಂಟ್ ಸಿ. ಲಲಿತಾಂಬಿಕಾ ಮತ್ತು ಉಪ ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಪಿ.ಪಿ. ಹಸೀಬ್ ಮೊದಲಾದವರು ಉಪಸ್ಥಿತರಿದ್ದರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಜೀಜಾ ಎಂ.ಪಿ. ಸ್ವಾಗತಿಸಿದರು. ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ವಂದಿಸಿದರು.
ರಕ್ತದಾನ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳು ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು.



