ನವದೆಹಲಿ: 'ತುರ್ತು ಪರಿಸ್ಥಿತಿ'ಯು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳವಾದ ಅಧ್ಯಾಯ. 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಲಹೆಯ ಆಧಾರದಲ್ಲಿ ರಾಷ್ಟ್ರಪತಿ ಅಂತಹ ಕ್ರಮ ತೆಗೆದುಕೊಂಡಿದ್ದರು.
ತುರ್ತು ಪರಿಸ್ಥಿತಿ ಜಾರಿಯಾಗಿ ಈ ಜೂನ್ 25ಕ್ಕೆ 51 ವರ್ಷಗಳು ತುಂಬಿವೆ.
ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿ ಬದುಕುತ್ತಿದ್ದ ಜನರು ಒಮ್ಮೆಗೇ ಸರ್ವಾಧಿಕಾರಿ ಆಡಳಿತದ ಕರಾಳ ರೂಪ ಕಂಡು ಬೆಚ್ಚಿಬಿದ್ದಿದ್ದರು. ಅವರ ಹಕ್ಕುಗಳು, ಅಭಿವ್ಯಕ್ತಿ, ಮಾಧ್ಯಮಗಳು ಎಲ್ಲವೂ ದಮನಕ್ಕೊಳಗಾಗಿದ್ದವು. ತುರ್ತು ಪರಿಸ್ಥಿತಿಯು ಒಂದು ರಾಜಕೀಯ ವಿದ್ಯಮಾನವಾಗಿ, ನಿರಂಕುಶ ಪ್ರಭುತ್ವದ ನೆನಪಾಗಿ, ಒಂದು ಎಚ್ಚರವಾಗಿ ಜನರ ಸ್ಮೃತಿಯಲ್ಲಿ ದಾಖಲಾಗಿದೆ. 21 ತಿಂಗಳು ಜಾರಿಯ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು.
ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪುತುರ್ತು ಪರಿಸ್ಥಿತಿಗೆ 50 ವರ್ಷ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಕರಾಳವಾದ ಅಧ್ಯಾಯ
ನಿರಂಕುಶ ಪ್ರಭುತ್ವದ ನೆನಪು:
*ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು, 1975ರ ಜೂನ್ 24ರಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಅದರ ಮರುದಿನವೇ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಘೋಷಿಸಿದ್ದರು
* ಆಂತರಿಕ ಕ್ಷೋಭೆ ಮತ್ತು ಬಾಹ್ಯ ದಾಳಿಯ ಕಾರಣದಿಂದ ದೇಶದ ಭದ್ರತೆಗೆ ಅಪಾಯ ಒದಗಿದಾಗ ತುರ್ತು ಪರಿಸ್ಥಿತಿ ಘೋಷಿಸಲು ಸಂವಿಧಾನವು ಅವಕಾಶ ಮಾಡಿಕೊಡುತ್ತದೆ. 1975ರ ಜೂನ್ 25ರಂದು ಆಂತರಿಕ ಕ್ಷೋಭೆಯ ಕಾರಣ ನೀಡಿ, ಸಂವಿಧಾನದ 352(1)ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಆದರೆ, ಅಂದಿನ ಸರ್ಕಾರದ ಈ ಕ್ರಮಕ್ಕೆ ದೇಶದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು
* ತುರ್ತು ಪರಿಸ್ಥಿತಿ ಜಾರಿಯಲ್ಲಿ ಇದ್ದಾಗ, ದೇಶದ ನಾಗರಿಕರ ಕೆಲವು ಮೂಲಭೂತ ಹಕ್ಕುಗಳು ಅಮಾನತಿಲ್ಲಿರುತ್ತವೆ. ಈ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಪ್ರಧಾನವಾಗಿ ಹೇಬಿಯಸ್ ಕಾರ್ಪಸ್ ಅನ್ನು ಅಮಾನತಿನಲ್ಲಿ ಇರಿಸಲಾಗಿತ್ತು. ಅಲ್ಲದೆ, ಹಲವು ಮೂಲಭೂತ ಹಕ್ಕುಗಳನ್ನೂ ಮೊಟಕುಗೊಳಿಸಲಾಗಿತ್ತು
* ಆ ಸಂದರ್ಭದ ಮತ್ತೊಂದು ಪ್ರಮುಖ ಘಟನೆ ಎಂದರೆ 'ಮಾಧ್ಯಮ ಸೆನ್ಸರ್‌ಶಿಪ್'. ಮಾಧ್ಯಮಗಳಿಗೆಂದೇ ಕೇಂದ್ರ ಸರ್ಕಾರವು ಒಂದು ಮಾರ್ಗಸೂಚಿಯನ್ನು ಜಾರಿ ಮಾಡಿತ್ತು. ಪ್ರಕಟಣೆಗೂ ಮುನ್ನ ಪತ್ರಿಕೆಗಳು, ಸರ್ಕಾರದ 'ಪತ್ರಿಕಾ ಸಲಹೆಗಾರ'ರಿಂದ ಅನುಮತಿ ಪಡೆಯಬೇಕಿತ್ತು
* ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಅಂದಿನ ವಿರೋಧ ಪಕ್ಷಗಳ ನಾಯಕರನ್ನು, ಸರ್ಕಾರದ ಟೀಕಾಕಾರನ್ನು ಸೆರೆಮನೆಗೆ ತಳ್ಳಲಾಗಿತ್ತು. ಅಂತಹವರು ಹಲವು ತಿಂಗಳು ಸೆರೆಮನೆವಾಸ ಅನುಭವಿಸಬೇಕಾಯಿತು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಮತ್ತು ಅದರ ವಿರುದ್ಧ ಪ್ರತಿಭಟಿಸಲು ಯತ್ನಿಸಿದ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಕೆಲ ಪತ್ರಕರ್ತರನ್ನೂ ಜೈಲಿಗೆ ಹಾಕಲಾಗಿತ್ತು

ಇಂದಿರಾ ಗಾಂಧಿ
ತುರ್ತು ಪರಿಸ್ಥಿತಿ ನಡೆದು ಬಂದ ಹಾದಿ:
1971 ಮಾರ್ಚ್: ಮೂರನೇ ಎರಡು ಪ್ರಚಂಡ ಬಹುಮತದೊಂದಿಗೆ ಮತ್ತೆ ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ ಇಂದಿರಾ ಗಾಂಧಿ
1971 ಮಾರ್ಚ್: ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ಸೋತಿದ್ದ ರಾಜ್ ನಾರಾಯಣ್ ಅವರಿಂದ ನ್ಯಾಯಾಲಯಲ್ಲಿ ದಾವೆ. ಇಂದಿರಾ ಅವರು ಚುನಾವಣೆಯಲ್ಲಿ ಅವ್ಯವಹಾರ ಎಸಗಿ ಗೆದ್ದಿದ್ದಾರೆ, 1951ರ ಜನಪ್ರಾತಿನಿಧ್ಯ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಆರೋಪ
1974 ಮೇ 8: ವೇತನ ಹೆಚ್ಚಳಕ್ಕೆ ಆಗ್ರಹಿಸಿ ದೇಶದಾದ್ಯಂತ ರೈಲ್ವೆ ಮುಷ್ಕರಕ್ಕೆ ಕರೆ ನೀಡಿದ ಜಾರ್ಜ್ ಫರ್ನಾಂಡಿಸ್. ಮೂರು ವಾರ ನಡೆದ ಮುಷ್ಕರ. ಹೋರಾಟವನ್ನು ಬಲವಂತವಾಗಿ ಹತ್ತಿಕ್ಕಿದ ಕೇಂದ್ರ ಸರ್ಕಾರ
1975 ಜೂನ್ 12: 1971ರ ಚುನಾವಣೆಯಲ್ಲಿ ರಾಯ್‌ಬರೇಲಿಯಲ್ಲಿ ಇಂದಿರಾ ವಿರುದ್ಧ ಸೋತಿದ್ದ ರಾಜ್ ನಾರಾಯಣ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು. ಇಂದಿರಾ ಅವರನ್ನು ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಿದ ನ್ಯಾ. ಜಗಮೋಹನ್‌ಲಾಲ್ ಸಿನ್ಹಾ
1975 ಜೂನ್ 12: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜೆ.ಪಿ ಬೆಂಬಲಿತ, ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪರಿವಾರಕ್ಕೆ ಗೆಲುವು
1975 ಜೂನ್ 24: ಇಂದಿರಾ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಕ್ಕೆ ಭಾಗಶಃ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್. ಪ್ರಧಾನಿಯಾಗಿ ಮುಂದುವರಿಯಲು ಅವಕಾಶ
1975 ಜೂನ್ 25: ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಸಂಬಂಧದ ಘೋಷಣೆಗೆ ಸಹಿ ಹಾಕಿದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್
1975 ಜೂನ್ 26: ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರ ಬಂಧನ. ತುರ್ತು ಪರಿಸ್ಥಿತಿ ಹೇರಿಕೆ ಸುಗ್ರೀವಾಜ್ಞೆಯನ್ನು ಅನುಮೋದಿಸುವುದಕ್ಕಾಗಿ ಜೂನ್ 26ರ ಬೆಳಿಗ್ಗೆ 6 ಗಂಟೆಗೆ ಸಚಿವ ಸಂಪುಟ ಸಭೆ. ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಿಕೆ
1975 ಜುಲೈ 21: ಸಂಸತ್ತಿನ ತುರ್ತು ಅಧಿವೇಶನ ಕರೆದು ತುರ್ತು ಪರಿಸ್ಥಿತಿ ಘೋಷಣೆಗೆ ಅನುಮೋದನೆ
1975 ಆಗಸ್ಟ್ 5: 1951ರ ಜನಪ್ರಾತಿನಿಧ್ಯ ಕಾಯ್ದೆಗೆ ಮಾಡಲಾದ ತಿದ್ದುಪಡಿಗಳನ್ನು ಪೂರ್ವಾನ್ವಯವಾಗುವಂತೆ ಅಂಗೀಕರಿಸಿದ ಸಂಸತ್ (ಕಾನೂನನ್ನು ಬದಲಿಸುವ ಮೂಲಕ ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವುದನ್ನು ಕಾಂಗ್ರೆಸ್ ಬಯಸಿತ್ತು)
1975 ನವೆಂಬರ್ 7: ರಾಯ್‌ಬರೇಲಿ ಕ್ಷೇತ್ರದಲ್ಲಿ ಇಂದಿರಾ ಆಯ್ಕೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
1975 ನವೆಂಬರ್ 12: ಪೆರೋಲ್ ಮೇಲೆ ಜೆಪಿ ಬಿಡುಗಡೆ; ಆಸ್ಪತ್ರೆಗೆ ದಾಖಲು
1976 ಜನವರಿ: ಲೋಕಸಭಾ ಚುನಾವಣೆಯನ್ನು ಒಂದು ವರ್ಷ ಮುಂದೂಡಲು ಸಂಸತ್ತಿನಲ್ಲಿ ನಿರ್ಣಯ
1976 ಜನವರಿ 19: ಸರ್ಕಾರದ '20 ಅಂಶಗಳ ಕಾರ್ಯಕ್ರಮ' ಘೋಷಣೆ
1976 ಜನವರಿ 31: ತಮಿಳುನಾಡಿನಲ್ಲಿದ್ದ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ವಜಾಗೊಳಿಸಿದ ರಾಷ್ಟ್ರಪತಿ
1976 ಮಾರ್ಚ್: ಗುಜರಾತ್‌ನ ಬಾಬು ಭಾಯಿ ಪಟೇಲ್ ನೇತೃತ್ವದ ಜನತಾ ಸರ್ಕಾರ ಪತನ
1976 ಅಕ್ಟೋಬರ್-ನವೆಂಬರ್: ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ಅಂಗೀಕರಿಸಿದ ಸಂಸತ್. ಇದು ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಪೂರ್ಣ ಅಧಿಕಾರ ನೀಡಿತಲ್ಲದೆ, ಸಂವಿಧಾನಕ್ಕೆ ಮಾಡಲಾದ ತಿದ್ದಪಡಿಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೂ ಅವಕಾಶ ಇಲ್ಲದಂತೆ ಮಾಡಿತು
1976 ನವೆಂಬರ್ 5: ಲೋಕಸಭೆಯ ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಿಸುವುದಕ್ಕೆ ನಿರ್ಣಯ ಅಂಗೀಕಾರ
1977 ಜನವರಿ 18: 1977ರ ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ ಇಂದಿರಾ
1977 ಜನವರಿ 18: ಮೊರಾರ್ಜಿ ದೇಸಾಯಿ, ಅಡ್ವಾಣಿ ಜೈಲಿನಿಂದ ಬಿಡುಗಡೆ
1977 ಜನವರಿ 20: ಜನತಾ ಪಕ್ಷ ಸ್ಥಾಪನೆ
1977 ಮಾರ್ಚ್ 16-20: ಸಾರ್ವತ್ರಿಕ ಚುನಾವಣೆ
1977 ಮಾರ್ಚ್ 20: ರಾಯ್‌ಬರೇಲಿಯಲ್ಲಿ ಇಂದಿರಾ ಗಾಂಧಿಗೆ, ಅಮೇಠಿಯಲ್ಲಿ ಸಂಜಯ್ ಗಾಂಧಿಗೆ ಸೋಲು. ಜನತಾ ಪಕ್ಷ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ
1977 ಮಾರ್ಚ್ 21: ತುರ್ತು ಪರಿಸ್ಥಿತಿ ವಾಪಸ್
1977 ಮಾರ್ಚ್ 24: ದೇಶದ ಐದನೇ ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ ಪ್ರಮಾಣ ವಚನ ಸ್ವೀಕಾರ
ಸಂವಿಧಾನ ಹತ್ಯಾ ದಿವಸ:
1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಜೂನ್ 25 ಅನ್ನು 'ಸಂವಿಧಾನ ಹತ್ಯಾ ದಿವಸ' ಎಂದು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿಯಿಂದ ಸಂತ್ರಸ್ತರಾದವರನ್ನು ಸ್ಮರಿಸುವ ಜೊತೆಗೆ, ಅವರನ್ನು ಗೌರವಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ 2025ರಲ್ಲಿ ಅಂಗೀಕರಿಸಿತ್ತು.
ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ ಎಲ್ಲರಿಗೂ ಗೌರವ ಸಲ್ಲಿಸಲು ಹಾಗೂ ಭವಿಷ್ಯದಲ್ಲಿ ಇಂತಹ ಅಧಿಕಾರ ದುರುಪಯೋಗವನ್ನು ಬೆಂಬಲಿಸದಂತೆ ಭಾರತದ ಜನರಿಗೆ ಮನವಿ ಮಾಡಲು ಜೂನ್ 25 ಅನ್ನು ಸಂವಿಧಾನ ಹತ್ಯಾ ದಿವಸ್ ಎಂದು ಘೋಷಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಇದು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿಯ ಹೇರಿಕೆಯ ನೆನಪು ಜೀವಂತವಾಗಿರಿಸಿದೆ.

