ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಕ್ಕಳ ಭವಿಷ್ಯದ ಜೊತೆ ಜೂಜಾಟ ಆಡುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಜೂನ್ 21ರಂದು ನಡೆಯಲಿರುವ ನೀಟ್-ಯುಜಿ ಮರು ಪರೀಕ್ಷೆಗೆ ಹಾಜರಾಗಬೇಕಾಗಿದ್ದ ನಾಗ್ಪುರ ಮೂಲದ ವಿದ್ಯಾರ್ಥಿಯೊಬ್ಬರಿಗೆ ಅಬುಧಾಬಿಯ ಶಾಲೆಯೊಂದನ್ನು ಪರೀಕ್ಷಾ ಕೇಂದ್ರವಾಗಿ ಹಂಚಿಕೆ ಮಾಡಿರುವ ಘಟನೆಯು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಸೂಕ್ತ ಪರಿಶೀಲನೆ ಮಾಡುತ್ತೇವೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು,'ನಾಗ್ಪುರದ ವಿದ್ಯಾರ್ಥಿಯೊಬ್ಬ ನೀಟ್ ಮರು ಪರೀಕ್ಷೆಗೆ ಒಂದು ತಿಂಗಳಿನಿಂದ ತಯಾರಿ ನಡೆಸುತ್ತಿದ್ದ. ಪರೀಕ್ಷೆಗೆ ಒಂದು ದಿನ ಮೊದಲು ಅವನು ತನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾನೆ. ಆದರೆ, ಅವನ ಪರೀಕ್ಷಾ ಕೇಂದ್ರವು ಅಬುಧಾಬಿಯಲ್ಲಿದೆ. ಅವನ ಬಳಿ ಪಾಸ್‌ಪೋರ್ಟ್ ಇಲ್ಲ, ಅವನನ್ನು ವಿದೇಶಕ್ಕೆ ಕಳುಹಿಸಲು ಅವರ ಕುಟುಂಬದ ಬಳಿ ಹಣದ ಕೊರತೆಯಿದೆ. ಈಗ ಸಮಯವೂ ಉಳಿದಿಲ್ಲ. ಘಟನೆಯಿಂದ ಮನನೊಂದಿರುವ ವಿದ್ಯಾರ್ಥಿಯು ರಾತ್ರಿಯಿಡೀ ಕಣ್ಣೀರು ಹಾಕಿದ್ದು, ಪರೀಕ್ಷೆಯನ್ನು ಬರೆಯಲು ನಿರಾಕರಿಸುತ್ತಿದ್ದಾನೆ. ಅವನ ಮೇಲಿರುವ ಒತ್ತಡವನ್ನು ಊಹಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ.
ಎನ್‌ಟಿಎ ದೇಶದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಯಾವುದೇ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ತಲುಪಲು ಸಾಧ್ಯವಾಗದ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ಅವರ ಸ್ವಂತ ನಗರದಲ್ಲಿ ಕೇಂದ್ರವನ್ನು ಒದಗಿಸಲು ಸಾಧ್ಯವಾಗದ ವ್ಯವಸ್ಥೆಗೆ ಪರೀಕ್ಷೆಗಳನ್ನು ನಡೆಸುವ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಜೂನ್ 21ರಂದು ಮರುಪರೀಕ್ಷೆ ನಡೆಯಲಿದೆ.



