ನಾಗ್ಪುರ : ದೇಶದಾದ್ಯಂತ ಜೂನ್ 21ರಂದು ನೀಟ್-ಯುಜಿ ಮರುಪರೀಕ್ಷೆ ನಡೆಯಲಿದೆ. ಆದರೆ, ನಾಗ್ಪುರದ ನೀಟ್ ಆಕಾಂಕ್ಷಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್‌ಗೆ ಅಬುಧಾಬಿಯ ಶಾಲೆಯೊಂದನ್ನು ಪರೀಕ್ಷಾ ಕೇಂದ್ರವಾಗಿ ಹಂಚಿಕೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಯೊಬ್ಬರಿಗೆ ತಪ್ಪಾಗಿ ವಿದೇಶದ (ಅಬುಧಾಬಿ) ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ (ಎನ್‌ಟಿಎ) ಸ್ಪಷ್ಟೀಕರಣ ಹೊರಬಿದ್ದಿದೆ.
'ನಾಗ್ಪುರದ ಅಬ್ದುಲ್ಲಾ ಮೊಹಮ್ಮದ್ ಅವರಿಗೆ ತಪ್ಪಾಗಿ ಅಬುಧಾಬಿಯ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗಿತ್ತು. ಈ ಕುರಿತು ಮಾಹಿತಿ ಸಿಕ್ಕ ಕೂಡಲೇ ಸಮಸ್ಯೆಯನ್ನು ಬಗೆಹರಿಸಲಾಗಿದೆ' ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
'ಲೋಪದೋಷವನ್ನು ಸರಿಪಡಿಸಲಾಗಿದ್ದು, ಅಬ್ದುಲ್ಲಾ ಮೊಹಮ್ಮದ್‌ಗೆ ನಾಗ್ಪುರದಲ್ಲೇ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಲಾಗಿದೆ' ಎಂದು ಹೇಳಿದ್ದಾರೆ.
ಮರುಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದ್ದು, ಅಬ್ದುಲ್ಲಾ ಮೊಹಮ್ಮದ್ ಮತ್ತು ಅವರ ಕುಟುಂಬಸ್ಥರನ್ನು ತೀವ್ರ ಆತಂಕಕ್ಕೆ ದೂಡಿತ್ತು.
ಇದಕ್ಕೂ ಮುನ್ನ ಅಬ್ದುಲ್ಲಾ ಮೊಹಮ್ಮದ್ ಅವರು ನಾಗ್ಪುರದ ಸರಸ್ವತಿ ವಿದ್ಯಾಲಯದಲ್ಲಿ ನೀಟ್ ಪರೀಕ್ಷೆ ಬರೆದಿದ್ದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಂತರ ಪರೀಕ್ಷೆಯನ್ನು ಮರುನಿಗದಿಪಡಿಸಲಾಯಿತು. ವಿದ್ಯಾರ್ಥಿ ತನ್ನ ಹೊಸ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದಾಗ, ಅವರ ಪರೀಕ್ಷಾ ಕೇಂದ್ರವನ್ನು ಯುಎಇಯ ಅಬುಧಾಬಿ ಇಂಡಿಯನ್ ಸ್ಕೂಲ್‌ಗೆ ಬದಲಾಯಿಸಿರುವುದು ಕಂಡುಬಂದಿತ್ತು.
ಅಬ್ದುಲ್ಲಾ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ತನ್ನ ಮೊದಲ ಆದ್ಯತೆಯಾಗಿ ನಾಗ್ಪುರ, ನಂತರ ವರ್ಧಾ ಮತ್ತು ಭಂಡಾರಾವನ್ನು ಆಯ್ಕೆ ಮಾಡಿದ್ದರು. ಆದರೆ, ಪ್ರವೇಶ ಪತ್ರದಲ್ಲಿ ವಿದೇಶಿ ಕೇಂದ್ರದ ಹೆಸರು ಇರುವುದನ್ನು ಕಂಡು ಅವರು ದಿಗ್ಭ್ರಮೆಗೊಂಡಿದ್ದರು.
'ಮಗನನ್ನು ಪರೀಕ್ಷೆಗಾಗಿ ವಿದೇಶಕ್ಕೆ (ಅಬುಧಾಬಿ) ಕಳುಹಿಸಲು ಯಾವುದೇ ರೀತಿಯಲ್ಲೂ ಸಾಧ್ಯವಿಲ್ಲ. ಅವನ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ ಮತ್ತು ಪ್ರಯಾಣದ ವ್ಯವಸ್ಥೆ ಮಾಡಲು ಈಗ ಸಮಯವೂ ಉಳಿದಿಲ್ಲ' ಎಂದು ಅಬ್ದುಲ್ಲಾ ತಂದೆ ಮೊಹಮ್ಮದ್ ತಾಲಿಬ್ ಹೇಳಿದ್ದರು.
ಕುಟುಂಬಸ್ಥರು ಎನ್‌ಟಿಎ ಸಹಾಯವಾಣಿಗೆ ದೂರು ನೀಡಿದ್ದರು. ಸಹಾಯವಾಣಿಯವರು ತಪ್ಪನ್ನು ಒಪ್ಪಿಕೊಂಡಿದ್ದು, ಪರಿಶೀಲನೆಯ ನಂತರ ಪರಿಷ್ಕೃತ ಪ್ರವೇಶ ಪತ್ರವನ್ನು ನೀಡುವುದಾಗಿ ಭರವಸೆ ನೀಡಿದ್ದರು ಎಂದು ವರದಿಯಾಗಿದೆ.
'ಇದು ಪರೀಕ್ಷಾ ಸಂಸ್ಥೆಯ ಗಂಭೀರ ಲೋಪ' ಎಂದು ಮಹಾರಾಷ್ಟ್ರದ ಮಾಜಿ ಶಿಕ್ಷಣ ಸಚಿವ ಡಾ. ಅನೀಸ್ ಅಹಮದ್ ಟೀಕಿಸಿದ್ದಾರೆ. ಈ ತಪ್ಪನ್ನು ತಕ್ಷಣವೇ ಸರಿಪಡಿಸಿ ವಿದ್ಯಾರ್ಥಿಗೆ ನಾಗ್ಪುರ ಅಥವಾ ಹತ್ತಿರದ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ಹಂಚಿಕೆ ಮಾಡಬೇಕೆಂದು ಎನ್‌ಟಿಎಗೆ ಒತ್ತಾಯಿಸಿದ್ದರು. ಪರೀಕ್ಷಾ ನಿರ್ವಹಣೆಯ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಯುತ್ತಿರುವ ಬೆನ್ನಲ್ಲೇ, ಈ ಘಟನೆಯು ಎನ್‌ಟಿಎ ಕಾರ್ಯವೈಖರಿಯ ಬಗ್ಗೆ ಮತ್ತಷ್ಟು ಕಳವಳವನ್ನು ಮೂಡಿಸಿದೆ.



