ನವದೆಹಲಿ: ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯುವ ಜಾಗತಿಕ ಸಂಸ್ಥೆಯಾದ ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್‌ಎಟಿಎಫ್) ಉಪಾಧ್ಯಕ್ಷರಾಗಿ ಭಾರತದ ವಿವೇಕ್ ಅಗರ್‌ವಾಲ್ ನೇಮಕಗೊಂಡಿದ್ದಾರೆ.
ಪ್ಯಾರಿಸ್‌ನಲ್ಲಿರುವ ಎಫ್‌ಎಟಿಎಫ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ, ಕೇಂದ್ರ ಸಾಂಸ್ಕೃತಿಕ ಇಲಾಖೆಯ ಕಾರ್ಯದರ್ಶಿ ವಿವೇಕ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ವಿವೇಕ್ ಅಗರ್ವಾಲ್ ಅವರು ಪ್ರಸ್ತುತ ಅಧಿಕಾರದಲ್ಲಿರುವ (2025ರ ಜುಲೈ 1ರಿಂದ) ಬ್ರಿಟನ್‌ನ ಗೈಲ್ಸ್ ಥಾಮ್ಸನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಇವರ ಅಧಿಕಾರಾವಧಿ 2026 ಜುಲೈ ನಿಂದ 2027ರ ಜೂನ್ ವರೆಗೆ ಇರಲಿದೆ.
ಭಾರತದ ಸದಸ್ಯತ್ವ:
ಅಕ್ರಮ ಹಣದ ವರ್ಗಾವಣೆ, ಭಯೋತ್ಪಾದನೆಗೆ ಹಣದ ಹರಿವು ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ತನಿಖೆ ಮಾಡಲು ಎಫ್‌ಎಟಿಎಫ್ ಎಂಬ ಆಂತರಿಕ ಸರ್ಕಾರಿ ಸಂಸ್ಥೆಯನ್ನು 1989ರಲ್ಲಿ ಸ್ಥಾಪಿಸಲಾಯಿತು. ಭಾರತವು 2010 ರಿಂದ ಈ ಪ್ರಭಾವಿ ಜಾಗತಿಕ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿದೆ.
ಭಾರತದ ವಿವೇಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರು 2026ರ ಜುಲೈನಿಂದ 2027ರ ಜೂನ್‌ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎಫ್‌ಎಟಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಯಾರು ಈ ವಿವೇಕ್ ಅಗರ್‌ವಾಲ್?
ವಿವೇಕ್ ಅವರು 1994ರ ಬ್ಯಾಚ್‌ನ ಮಧ್ಯಪ್ರದೇಶ ಕೆಡರ್‌ನ ಐಎಎಸ್ ಅಧಿಕಾರಿ. ಈ ಮೊದಲು ಅವರು ಎಫ್‌ಎಟಿಎಫ್‌ಗೆ ಭಾರತೀಯ ನಿಯೋಗದ ಮುಖ್ಯಸ್ಥರಾಗಿ ಮತ್ತು ಭಾರತದ ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್ (ಈIU) ನ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಭಾರತಕ್ಕೆ ಸಂದ ಯಶಸ್ಸು
ವಿವೇಕ್ ಅವರ ನೇಮಕ ಭಾರತಕ್ಕೆ ಸಂದ ಯಶಸ್ಸು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಬಣ್ಣಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ನೀತಿ ಮತ್ತು ಭಯೋತ್ಪಾದಕ ಜಾಲಗಳ ಆರ್ಥಿಕ ಮೂಲಗಳನ್ನು ನಾಶಮಾಡಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳಿಗೆ ಸಿಕ್ಕ ಫಲ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ವಿವೇಕ್ , ಹಣ ಅಕ್ರಮ ವರ್ಗಾವಣೆ ತಡೆ ಸಂಬಂಧ ಭಾರತದ ಸಾಮೂಹಿಕ ಪ್ರಯತ್ನಕ್ಕೆ ಸಿಕ್ಕ ಯಶಸ್ಸು. 'ಈ ಜವಾಬ್ದಾರಿ ಸಿಕ್ಕಿರುವುದು ನನಗೆ ಹೆಮ್ಮೆಯ ಸಂಗತಿ. ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಸುರಕ್ಷಿತವಾಗಿಡಲು ಎಫ್‌ಎಟಿಎಫ್ ಜೊತೆಗೂಡಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.



