ನವದೆಹಲಿ: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಕಳೆದ ವರ್ಷ ನಡೆಸಿದ 'ಆಪರೇಷನ್ ಸಿಂಧೂರ' ಸೇನಾ ಕಾರ್ಯಾಚರಣೆ ವೇಳೆ ಹುತಾತ್ಮರಾದ ಆರು ಯೋಧರ ಹೆಸರುಗಳನ್ನು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಪ್ರಕಟಿಸಿದೆ.
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರ ಹೆಸರುಗಳನ್ನು ಕೆತ್ತಲಾಗಿದ್ದು, ಸ್ಮಾರಕಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನಲ್ಲಿಯೂ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ, '..ಸಿಂಧೂರ' ಕಾರ್ಯಾಚರಣೆ ವೇಳೆ ಭಾರತೀಯ ಪಾಳೆಯದಲ್ಲಿಯೂ ಸಾವು-ನೋವು ಆಗಿರುವುದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಂತಾಗಿದೆ.
ಹುತಾತ್ಮರಾದವರು..
ಸೇನೆಯ ವಿವಿಧ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬೇದಾರ್ ಮೇಜರ್ ಪವನ್ ಕುಮಾರ್, ರೈಫಲ್‌ಮನ್ ಸುನಿಲ್ ಕುಮಾರ್, ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, ವಾಯುಸೇನೆ ತಂತ್ರಜ್ಞ ಎಂ. ಮುರಳಿನಾಯಕ್, ಹವಿಲ್ದಾರ್ ಸುನಿಲ್ ಕುಮಾರ್ ಸಿಂಗ್, ಸರ್ಜಂಟ್ ಸುರೇಂದ್ರ ಕುಮಾರ್ ಅವರು 'ಆಪರೇಷನ್ ಸಿಂಧೂರ' ವೇಳೆ ಹುತಾತ್ಮರಾಗಿದ್ದಾರೆ ಎಂದು ತಿಳಿಸಲಾಗಿದೆ.
ರಾಷ್ಟ್ರ ಸೇವೆಯಲ್ಲಿ ತೊಡಗಿದ್ದಾಗಲೇ ಹುತಾತ್ಮರಾದ ವೀರರನ್ನು ಸ್ಮರಿಸುವ ಸಲುವಾಗಿ ಸ್ಮಾರಕ 3ಆ ಗೋಡೆಯಲ್ಲಿ ಹೆಸರುಗಳನ್ನು ಕೆತ್ತಲಾಗಿದೆ.
ಭಾರತ - ಪಾಕಿಸ್ತಾನ ಪಡೆಗಳು ನಡೆಸಿದ ಸಂಘರ್ಷದ ವೇಳೆ ಎರಡೂ ಕಡೆ ಸಾಕಷ್ಟು ಹಾನಿಯಾಗಿದೆ ಎಂಬ ಬಗ್ಗೆ ಸಾಕಷ್ಟು ವದಂತಿ, ವರದಿಗಳು ಹರಿದಾಡಿದ್ದರೂ, ಸರ್ಕಾರ ಇದುವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಿಡುಗಡೆ ಮಾಡಿರಲಿಲ್ಲ.
ರಾಷ್ಟ್ರ ರಾಜಧಾನಿಯ 'ಇಂಡಿಯಾ ಗೇಟ್'ನಲ್ಲಿ 2019ರಲ್ಲಿ ಉದ್ಘಾಟನೆಗೊಂಡಿರುವ ಯುದ್ಧ ಸ್ಮಾರಕದಲ್ಲಿ, ಸ್ವಾತಂತ್ರ್ಯಾನಂತರ ನಡೆದ ಸೇನಾ ಕಾರ್ಯಾಚರಣೆಗಳು, ಸಂಘರ್ಷಗಳಲ್ಲಿ ಹುತಾತ್ಮರಾದ ಯೋಧರಿಗೆ ಸ್ಮರಿಸಲಾಗುತ್ತದೆ.
ಆಪರೇಷನ್ ಸಿಂಧೂರ ನಡೆಸಿದ್ದೇಕೆ?
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು 2025ರ ಏಪ್ರಿಲ್ 22ರಂದು ನಡೆಸಿದ್ದ ಗುಂಡಿನ ದಾಳಿ ವೇಳೆ 22 ಮಂದಿ ಮೃತಪಟ್ಟಿದ್ದರು.
ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮೇ 7ರಂದು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಕೈಗೊಂಡಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತಯಬಾ ಸಂಘಟನೆಗಳ 9 ನೆಲೆಗಳ ಮೇಲೆ ದಾಳಿ ನಡೆಸಿತ್ತು.

