HEALTH TIPS

ನಕಲಿ ORS ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದ ಖ್ಯಾತ ಮಕ್ಕಳ ತಜ್ಞೆ ಡಾ.ಶಿವರಂಜನಿ ಸಂತೋಷ್ IAP ತೊರೆದಿದ್ದೇಕೆ?

 ದೇಶದಲ್ಲಿ ನಕಲಿ ಒಆರ್‌ಎಸ್ (ORS) ಮಾರಾಟ ಜಾಲದ ವಿರುದ್ಧ ಕಳೆದ ಎಂಟು ವರ್ಷಗಳಿಂದ ನಿರಂತರ ಜಾಗೃತಿ ಹೋರಾಟ ನಡೆಸುತ್ತಾ ಬಂದಿದ್ದ ಹೈದರಾಬಾದ್‌ನ ಖ್ಯಾತ ಮಕ್ಕಳ ತಜ್ಞೆ ಡಾ. ಶಿವರಂಜನಿ ಸಂತೋಷ್ ಅವರು ಮೊದಲ ಬಾರಿಗೆ ತೀವ್ರ ನಿರಾಶೆಗೊಂಡಿದ್ದಾರೆ. ಈ ಹೋರಾಟದ ಹಿನ್ನೆಲೆಯಲ್ಲಿ 'ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್' (IAP) ಮತ್ತು ಪ್ರಮುಖ ಫಾರ್ಮಾ ದೈತ್ಯ ಕಂಪನಿ 'ಕೆನ್‌ವ್ಯೂ' ನಡುವೆ ಉಂಟಾದ ಹಿತಾಸಕ್ತಿ ಸಂಘರ್ಷದಿಂದಾಗಿ, ಅವರು ಐಎಪಿ ಸಂಘಟನೆಗೆ ರಾಜೀನಾಮೆ ನೀಡಿದ್ದಾರೆ.


ಈ ನಡುವೆ, ಐಎಪಿಯ ಕೆಲವು ಸದಸ್ಯರು ಡಾ. ಶಿವರಂಜನಿ ಅವರ ಈ ಹೋರಾಟವನ್ನು 'ಪ್ರಚಾರದ ಗಿಮಿಕ್' ಎಂದು ಆರೋಪಿಸಿರುವುದು ಸಂಘರ್ಷಕ್ಕೆ ಕಾರಣವಾಗಿದೆ.

ಸಹೋದ್ಯೋಗಿಗಳಿಂದ ಸೂಕ್ತ ಬೆಂಬಲ ಸಿಗದ ಕಾರಣ ತೀವ್ರ ಬೇಸರಗೊಂಡಿದ್ದ ಅವರು ಕೆಲ ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು. ಆದರೆ, ಇತ್ತೀಚೆಗೆ ಅವರು ತಮ್ಮ ಖಾತೆಗಳನ್ನು ಪುನಃ ಸಕ್ರಿಯಗೊಳಿಸಿದ್ದಾರೆ.

ಮಕ್ಕಳ ವೈದ್ಯರ ಸಂಘದಿಂದ ಹೊರಬಂದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅವರು, "ನಮ್ಮ ಮಕ್ಕಳ ಆರೋಗ್ಯಕ್ಕಿಂತ ಫಾರ್ಮಾ ಕಂಪನಿಗಳ ಹಣಕಾಸಿನ ನೆರವೇ ಮುಖ್ಯವಾಗಬಾರದು" ಎಂದು ಹೇಳಿದ್ದಾರೆ.

ನಕಲಿ ಒಆರ್‌ಎಸ್ ವಿರುದ್ಧದ ತಮ್ಮ ಹೋರಾಟಕ್ಕೆ ಐಎಪಿ ಮತ್ತು ಇತರ ವೈದ್ಯಕೀಯ ಸಂಘಟನೆಗಳ ನಾಯಕರು ಬೆಂಬಲ ನೀಡದಿದ್ದಕ್ಕೆ ವೈದ್ಯೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯೊಂದಿಗೆ ಮಾತನಾಡಿದ ಡಾ.ಶಿವರಂಜನಿ ಸಂತೋಷ್, "ಒಂಟಿಯಾಗಿ ಹೋರಾಡಿ ನನಗೆ ಸಾಕಾಗಿದೆ . ಈ ಪರಿಸ್ಥಿತಿಯಿಂದಾಗಿ ನನ್ನ ಕುಟುಂಬವೂ ತೀವ್ರ ಆತಂಕದಲ್ಲಿದೆ. ಈ ಹಂತದಲ್ಲಿ ಮುಂದೆ ಏನು ಮಾಡಬೇಕೆಂದು ನನಗೆ ನಿಜವಾಗಿಯೂ ತಿಳಿಯುತ್ತಿಲ್ಲ. ಇದು ಒಬ್ಬ ವ್ಯಕ್ತಿಯ ಹೋರಾಟವಾಗಿರಲಿಲ್ಲ, ಸರಿಯಾದ ವಿಷಯಕ್ಕಾಗಿ ಎಲ್ಲರೂ ಒಟ್ಟಾಗಿ ನಿಲ್ಲಬೇಕಾಗಿತ್ತು" ಎಂದು ಹೇಳಿದ್ದಾರೆ.

2026 ಮಾರ್ಚ್ ನಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಗ್ರಾಹಕ ಆರೋಗ್ಯ ವಿಭಾಗವಾದ 'ಕೆನ್‌ವ್ಯೂ' ಫಾರ್ಮಾ ಸಂಸ್ಥೆಯು, ಡಾ. ಶಿವರಂಜನಿ ಅವರು "ಅವೈಜ್ಞಾನಿಕ ಸಂಗತಿಗಳ" ಮೂಲಕ ತಮ್ಮ ಎನರ್ಜಿ ಡ್ರಿಂಕ್‌ನ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಿತ್ತು.

ಹಿನ್ನೆಲೆ ಏನು?

ಡಾ. ಶಿವರಂಜನಿ ಸಂತೋಷ್ ಅವರು ಸಾಮಾಜಿಕ ಜಾಲತಾಣಗಳು ಮತ್ತು ಕಾನೂನು ಮಾರ್ಗಗಳೆರಡನ್ನೂ ಬಳಸಿಕೊಂಡು, ಹಣ್ಣಿನ ಸುವಾಸನೆ ಹೊಂದಿರುವ ಎಲೆಕ್ಟ್ರೋಲೈಟ್ ಪಾನೀಯಗಳನ್ನು 'ಒಆರ್‌ಎಸ್' ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಬ್ರ್ಯಾಂಡ್‌ಗಳ ವಿರುದ್ಧ ದೊಡ್ಡ ಮಟ್ಟದ ಜಾಗೃತಿ ಅಭಿಯಾನವನ್ನು ಕೈಗೊಂಡಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತೀವ್ರ ಭೇದಿ ಹಾಗೂ ವಾಂತಿ ಪ್ರಕರಣಗಳು ಶಿಶುಗಳು ಮತ್ತು ಸಣ್ಣ ಮಕ್ಕಳ ಸಾವಿಗೆ ಪ್ರಮುಖ ಕಾರಣಗಳಾಗಿವೆ. ಇದಕ್ಕೆ ಚಿಕಿತ್ಸೆ ನೀಡಲು ಪ್ರಮುಖ ಮಾರ್ಗವೆಂದರೆ ವೈಜ್ಞಾನಿಕವಾಗಿ ಸಿದ್ಧಪಡಿಸಿದ ಗ್ಲೂಕೋಸ್-ಎಲೆಕ್ಟ್ರೋಲೈಟ್ ದ್ರಾವಣವಾದ 'ಓರಲ್ ರೀಹೈಡ್ರೇಶನ್ ಸಾಲ್ಟ್ಸ್' ಅಥವಾ 'ಒಆರ್‌ಎಸ್' ಅನ್ನು ನೀಡುವುದು. ಈ ದ್ರಾವಣವು ಎಲೆಕ್ಟ್ರೋಲೈಟ್‌ಗಳು ಮತ್ತು ಗ್ಲೂಕೋಸ್‌ನ ನಿಖರವಾದ ಮಿಶ್ರಣವನ್ನು ಹೊಂದಿರುತ್ತದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries