ನವದೆಹಲಿ: ಗಗನಯಾನ ಮತ್ತು ಇತರ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂಪ್ರೇರಿತ ನಿವೃತ್ತಿಗೆ ಅನುಮೋದನೆ ನಿಯಮಗಳನ್ನು ಬಾಹ್ಯಾಕಾಶ ಇಲಾಖೆ ಬಿಗಿಗೊಳಿಸಿದೆ. ಅನುಭವಿ ಸಿಬ್ಬಂದಿಗಳು ಕೆಲಸ ತೊರೆಯುತ್ತಿರುವ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಜ್ಞಾನಿಗಳ ರಾಜೀನಾಮೆ ಹಿನ್ನೆಲೆಯಲ್ಲಿ ಯೋಜನೆ-ನಿರ್ದಿಷ್ಟ ಪರಿಣತಿಯ ಕೊರತೆಯು ಕಳವಳ ವ್ಯಕ್ತವಾಗಿದೆ ಎಂದು India Today ವರದಿ ಮಾಡಿದೆ.
ಇದೀಗ ಇಸ್ರೋದಿಂದ ಹೆಚ್ಚುತ್ತಿರುವ ರಾಜೀನಾಮೆಗಳ ಅಲೆಯನ್ನು ತಡೆಯಲು ಬಾಹ್ಯಾಕಾಶ ಇಲಾಖೆ (DoS) ಕ್ರಮ ಕೈಗೊಂಡು, ಹೊಸ ನಿರ್ದೇಶನವನ್ನು ಹೊರಡಿಸಿದೆ. ಹೊಸ ನಿರ್ದೇಶನವು ಮಾನವನ ಬಾಹ್ಯಾಕಾಶ ಹಾರಾಟದ ಯೋಜನೆಯಾಗಿರುವ ಗಗನಯಾನ ಸೇರಿದಂತೆ ನಿರ್ಣಾಯಕ ರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳ ಸ್ವಯಂಪ್ರೇರಿತ ನಿವೃತ್ತಿ ಮತ್ತು ರಾಜೀನಾಮೆಗಳನ್ನು ನಿಯಂತ್ರಿಸಲು ನಿಯಮಗಳನ್ನು ಬಿಗಿಗೊಳಿಸಿದೆ.
ಜುಲೈ 14ರಂದು ಕಳುಹಿಸಿದ ಆಂತರಿಕ ಮೆಮೊರಂಡಮ್ ನಲ್ಲಿ ಗ್ರೂಪ್ 'ಎ' ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿಂದ ರಾಜೀನಾಮೆ ಅಥವಾ ಸ್ವಯಂಪ್ರೇರಿತ ನಿವೃತ್ತಿ ವಿನಂತಿಗಳನ್ನು ನಿಯಮಿತವಾಗಿ ಸ್ವೀಕರಿಸಬಾರದು ಎಂದು ಇಸ್ರೋ ಕೇಂದ್ರಗಳಿಗೆ ನಿರ್ದೇಶಿಸಲಾಗಿದೆ. ಮಾತ್ರವಲ್ಲದೆ ಅಂತಹ ವಿನಂತಿಗಳನ್ನು ಇದೀಗ ಅನುಮೋದನೆಗಾಗಿ ಬಾಹ್ಯಾಕಾಶ ಇಲಾಖೆಗೆ ಉಲ್ಲೇಖಿಸಬೇಕಿದೆ.
ಅನುಭವಿ ವಿಜ್ಞಾನಿಗಳ ಹೊರಹರಿವು ಹೆಚ್ಚಾಗಿದೆ ಎಂದು ಇಸ್ರೋ ಅಧಿಕಾರಿಗಳು ವಿವರಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಾಹ್ಯಾಕಾಶ ಇಲಾಖೆ ಅಧಿಕೃತವಾಗಿ ನಿರ್ಗಮನಗಳ ಸಂಖ್ಯೆಯನ್ನು ಬಹಿರಂಗಪಡಿಸದೆ ಇದ್ದರೂ, ಇತ್ತೀಚೆಗಿನ ತಿಂಗಳುಗಳಲ್ಲಿ 100ರಿಂದ 120 ವಿಜ್ಞಾನಿಗಳು ರಾಜೀನಾಮೆ ನೀಡಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಿಂದ ಸುಮಾರು 80 ವಿಜ್ಞಾನಿಗಳು ಹೊರ ಹೋಗಿದ್ದಾರೆ. ತಿರುವನಂತಪುರದ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಿಂದ ಸುಮಾರು 20 ವಿಜ್ಞಾನಿಗಳು ಹೊರ ಹೋಗಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನಿಗಳು ತೊರೆಯುವ ಸಾಧ್ಯತೆಯಿದೆ. ಆದರೆ ರಾಜೀನಾಮೆಗಳು ಪ್ರಸ್ತುತ ಮೌಲ್ಯಮಾಪನದಲ್ಲಿವೆ ಎಂದು ಹೇಳಲಾಗಿದೆ.

