ಬೀಜಿಂಗ್: ಕಳೆದ 24 ಗಂಟೆಗಳಲ್ಲಿ ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಸಂಭವಿಸಿದ ಮಳೆ ಸಂಬಂಧಿತ ಅವಘಡಗಳಲ್ಲಿ ಕನಿಷ್ಠ 20 ಜನ ಮೃತಪಟ್ಟು, 330ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ವಿಪತ್ತು ಪರಿಹಾರ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಷಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು 'ಕ್ಸಿನ್ಹುವಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗನ್ಸು ಪ್ರಾಂತ್ಯದಲ್ಲಿ ಭೂಕುಸಿತ: 5 ಸಾವು
ಮಂಗಳವಾರ, ವಾಯವ್ಯ ಚೀನಾದ ಗನ್ಸು ಪ್ರಾಂತ್ಯದ ಪಟ್ಟಣದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಒಟ್ಟು 33 ಜನ ಸಿಲುಕಿದ್ದರು. ಆ ಪೈಕಿ 21 ಜನರನ್ನು ಹೊರತೆಗೆಯಲಾಗಿದ್ದು, ಅವರಲ್ಲಿ ಐವರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ನಾಪತ್ತೆಯಾದ ಇತರ 12 ಜನರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾ ಮುಂದುವರಿದಿದೆ.
ಹುಬೈ ಪ್ರಾಂತ್ಯದಲ್ಲಿ ಅಪ್ಪಳಿಸಿದ ಬಿರುಗಾಳಿ: 11 ಮಂದಿ ಸಾವು
ಸೋಮವಾರ ರಾತ್ರಿ, ಹುಬೈ ಪ್ರಾಂತ್ಯದ ಪೂರ್ವ ಭಾಗದಲ್ಲಿ ಅಪ್ಪಳಿಸಿದ ಬಿರುಗಾಳಿ, ಗುಡುಗು ಸಹಿತ ಮಳೆಯಿಂದಾಗಿ 11 ಜನ ಮೃತಪಟ್ಟು, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಇಲ್ಲಿನ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕನಿಷ್ಠ 331 ಜನ ಗಾಯಗೊಂಡಿದ್ದಾರೆ . 400 ಕ್ಕೂ ಹೆಚ್ಚು ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 22 ಕಟ್ಟಡಗಳು ಸಂಪೂರ್ಣ ನೆಲಸಮವಾಗಿದ್ದು, 4,855 ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
ಮೈಸಾಕ್ ಚಂಡಮಾರುತದ ಆರ್ಭಟ
ದಕ್ಷಿಣ ಚೀನಾದ ಗುವಾಂಗ್ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದ ರಾಜಧಾನಿ ನಾನ್ನಿಂಗ್‌ನಲ್ಲಿ 'ಮೈಸಾಕ್' ಚಂಡಮಾರುತದ ಪ್ರಭಾವದಿಂದಾಗಿ ದಾಖಲೆ ಪ್ರಮಾಣದ ಮಳೆಯಾಗಿದೆ. ಇಲ್ಲಿ ಸಂಭವಿಸಿದ ಪ್ರವಾಹಕ್ಕೆ ನಾಲ್ವರು ಮೃತಪಟ್ಟಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ.
ಪ್ರವಾಹದಿಂದ ಸುಮಾರು 93,300 ಕ್ಕೂ ಹೆಚ್ಚು ಜನ ತೊಂದರೆಗೊಳಗಾಗಿದ್ದಾರೆ. ಈ ಪೈಕಿ 54,460 ಜನರನ್ನು ಅಧಿಕಾರಿಗಳು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

