ಲಖನೌ: ಅಯೋಧ್ಯೆಯ ರಾಮಮಂದಿರದಲ್ಲಿ ನಗದು ಕಾಣಿಕೆಯನ್ನು ಎಣಿಕೆ ಕೆಲಸ ಮಾಡುತ್ತಿದ್ದ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ 23 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.
ಕೆಲಸದ ವೇಳಾಪಟ್ಟಿಯಲ್ಲಿನ ಬದಲಾವಣೆಗಳು ಹಾಗೂ ಸಂಬಳದಲ್ಲಿನ ಕಡಿತದ ಕಾರಣ ನೀಡಿ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ.
ಈ ಉದ್ಯೋಗಿಗಳು ಮೊದಲು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಹೊಸ ವೇಳಾಪಟ್ಟಿ ಪ್ರಕಾರ ಎಲ್ಲರೂ ಒಂದೇ ಪಾಳಿಯಲ್ಲಿ ಕೆಲಸ ಮಾಡಬೇಕಾಯಿತು. ಕೆಲಸದ ಅವಧಿಯನ್ನೂ 6ರಿಂದ 9 ಗಂಟೆಗೆ ವಿಸ್ತರಿಸಲಾಯಿತು ಹಾಗೂ ರಜೆಗಳನ್ನೂ ಕಡಿಮೆ ಮಾಡಿ, ವೇತನವನ್ನೂ ಕಡಿತಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಬದಲಾವಣೆಗಳನ್ನು ವಿರೋಧಿಸಿ, ಹಿಂದಿನ ವೇಳಾಪಟ್ಟಿಯನ್ನೇ ಅನುಸರಿಸುವಂತೆ ಟ್ರಸ್ಟ್ ಆಡಳಿತ ಮಂಡಳಿಯನ್ನು ಅವರು ಕೋರಿದ್ದರು. ಆದರೆ ಈ ಬೇಡಿಕೆಯನ್ನುತಿರಸ್ಕರಿಸಲಾಯಿತು ಎನ್ನಲಾಗಿದೆ.
36 ಮಂದಿ ನಗದು ಕಾಣಿಕೆಯನ್ನು ಎಣಿಸುವ ಕೆಲಸ ಮಾಡುತ್ತಾರೆ. ಈ ಮೊದಲು ಎಲ್ಲರಿಗೂ ತಿಂಗಳಿಗೆ ₹14,755 ವೇತನ ನೀಡಲಾಗುತ್ತಿತ್ತು. ಕೆಲವರಿಗಷ್ಟೇ ವೇತನ ಹೆಚ್ಚಿಸಲಾಗಿದೆ. ಈ ಪೈಕಿ 13 ಮಂದಿ ಮಾತ್ರವೇ ಗುರುವಾರ ಕೆಲಸಕ್ಕೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಇಲ್ಲಿ ನಗದು ಕಾಣಿಕೆ ಎಣಿಕೆಗೆ ನೇಮಿಸಿಕೊಳ್ಳಲಾಗಿತ್ತು. ಇದೀಗ ರಾಮಮಂದಿರದ ಕಾಣಿಕೆ ಕಳವು ಪ್ರಕರಣದ ಸಂದರ್ಭದಲ್ಲಿ ಈ ಎಲ್ಲ ಉದ್ಯೋಗಿಗಳನ್ನೂ ಮತ್ತೆ ಗೃಹ ರಕ್ಷಕ ದಳಕ್ಕೆ ಮರಳಿಸಲು ಯೋಜಿಸಲಾಗಿತ್ತು. ಇದು ಇಷ್ಟವಿಲ್ಲದೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
ಸುಪ್ರೀಂ' ನಿಗಾದಲ್ಲಿ ಸಿಬಿಐ ತನಿಖೆ ನಡೆಯಲಿ'
ಚಂಡೀಗಢ (PTI): ಅಯೋಧ್ಯೆಯ ರಾಮಮಂದಿರದಲ್ಲಿನ ಹಣ ದುರುಪಯೋಗ ಪ್ರಕರಣವನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
'ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿರುವುದು ಕಣ್ಣೊರೆಸುವ ತಂತ್ರವಷ್ಟೇ. ಕಾಣಿಕೆ ದುರುಪಯೋಗವು ಹಿಂದೂಗಳ ನಂಬಿಕೆ ಮೇಲಿನ ದಾಳಿ. ಆರೋಪಿಗಳು ಸೋಮನಾಥ ದೇವಸ್ಥಾನದ ಮೇಲಿನ ದಾಳಿಕೋರ ಮಹಮದ್ ಘಜ್ನಿಯನ್ನೂ ಮೀರಿಸಿದ್ದಾರೆ' ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜ ವಾರಿಂಗ್ ಶುಕ್ರವಾರ ಆರೋಪಿಸಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಶಕ್ತಿಸಿನ್ಹ ಗೋಹಿಲ್ ಅವರು, 'ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ವಿಸರ್ಜನೆ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.
13ರಂದು ವಿಚಾರಣೆ
ನವದೆಹಲಿ: ಕಾಣಿಕೆ ಕಳವು ಮತ್ತು ದೇಣಿಗೆ ದುರುಪಯೋಗ ಕುರಿತು ಸಿಬಿಐ ತನಿಖೆ ಮತ್ತು ಸಮಗ್ರ ಲೆಕ್ಕಪರಿಶೋಧನೆ ಸೇರಿದಂತೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇದೇ 13ರಂದು ಕೈಗೆತ್ತಿಕೊಳ್ಳಲಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ, ವಿ. ಮೋಹನಾ ಅವರ ಪೀಠ ವಿಚಾರಣೆ ನಡೆಸಲಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಣಕಾಸಿನ ವ್ಯವಹಾರ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪರಿಶೀಲನೆ ನಡೆಯಬೇಕು ಎಂದು ಕೋರಿ ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್ ಸೇರಿದಂತೆ ಇತರರು ಮೂರು ರಿಟ್ ಅರ್ಜಿ ಸಲ್ಲಿಸಿದ್ದಾರೆ.

