HEALTH TIPS

'ರಾಜ್ಯ ಸ್ಥಾನಮಾನ ಬೇಕಾದರೆ ನಮ್ಮೊಂದಿಗೆ ಬನ್ನಿ': ಎನ್‌ಸಿ ಶಾಸಕರಿಗೆ BJP ಆಮಿಷ?

 ಶ್ರೀನಗರ: 'ಪಕ್ಷ ತೊರೆದು ನಮ್ಮೊಂದಿಗೆ ಕೈ ಜೋಡಿಸಿದರೆ ₹ 20ರಿಂದ ₹ 30 ಕೋಟಿ, ಸಚಿವ ಸ್ಥಾನ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುತ್ತೇವೆ' ಎಂಬುದಾಗಿ ನ್ಯಾಷನಲ್‌ ಕಾನ್ಫರೆನ್ಸ್‌ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡಿದೆ ಎಂದು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಶನಿವಾರ ಆರೋಪಿಸಿದ್ದಾರೆ. 


ಶ್ರೀನಗರದ ಹಜರತ್‌ಬಲ್‌ ಪ್ರದೇಶದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ 'ಮದರ್-ಎ-ಮೆಹರ್ಬಾನ್' ಸಮಾವೇಶದಲ್ಲಿ ಮಾತನಾಡಿದ ಅಬ್ದುಲ್ಲಾ, ನ್ಯಾಷನಲ್‌ ಕಾನ್ಫರೆನ್ಸ್‌ ಅನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದ್ದಾರೆ.

ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಸುಪ್ರೀಂ ಕೋರ್ಟ್‌ನ ವಕೀಲರೊಬ್ಬರು ಎನ್‌ಸಿ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದಿರುವ ಅವರು, 'ಬಿಜೆಪಿಯ ಆಮಿಷದ ವಿಚಾರವನ್ನು ಜಮ್ಮುವಿನ ಶಾಸಕರಲ್ಲಿ ಒಬ್ಬರು ನನಗೆ ತಿಳಿಸಿದರು. ಇದಕ್ಕೆ ದೇವರೇ (ಅಲ್ಲಾ) ಸಾಕ್ಷಿ' ಎಂದು ಹೇಳಿದ್ದಾರೆ

ರಾಜ್ಯದ ಸ್ಥಾನಮಾನದ ವಿಚಾರವನ್ನು ರಾಜಕೀಯ ಸಂಘರ್ಷಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಎಂ ಪ್ರತಿಪಾದಿಸಿದ್ದಾರೆ.

'ಹಣ ಹಾಗೂ ಮಂತ್ರಿ ಸ್ಥಾನದ ಆಮಿಷ ಕೆಲಸ ಮಾಡದಿದ್ದಾಗ, 'ನಮ್ಮೊಂದಿಗೆ ಬನ್ನಿ; ರಾಜ್ಯದ ಸ್ಥಾನಮಾನ ನೀಡುತ್ತೇವೆ' ಎಂದು ನೀವು ನನ್ನ ಶಾಸಕರಿಗೆ ಹೇಳುತ್ತಿದ್ದೀರಿ. ಆದರೆ, ಎನ್‌ಸಿಯ ಯಾವೊಬ್ಬ ಶಾಸಕರೂ ವಿಶ್ವಾಸವನ್ನು ಮಾರಾಟಕ್ಕೆ ಇಡುವುದಿಲ್ಲ' ಎಂದು ಗುಡುಗಿದ್ದಾರೆ. ಹಾಗೆಯೇ, 'ನಮ್ಮ ತಾಳ್ಮೆ ಮತ್ತು ಒಳ್ಳೆಯತನವನ್ನು ಪರೀಕ್ಷಿಸಬೇಡಿ' ಎಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರದ ಇತರ ಹಲವು ಸಚಿವರ ಎದುರು ರಾಜ್ಯ ಸ್ಥಾನಮಾನದ ವಿಚಾರವನ್ನು ಪದೇ ಪದೇ ಪ್ರಸ್ತಾಪ ಮಾಡಿದ್ದೇನೆ. ಆದರೆ, 'ಸರಿಯಾದ ಸಮಯ ಬಂದಾಗ' ಅದನ್ನು ಮರುಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. 'ಆ ಸರಿಯಾದ ಸಮಯ ಯಾವಾಗ ಬರುತ್ತದೆ ಎಂಬುದನ್ನು ದಯವಿಟ್ಟು ತಿಳಿಸಿ' ಎಂದು ಕೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಸ್ಥಾನಮಾನದ ಕುರಿತು ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೆಚ್ಚುತ್ತಿರುವ ಹೊತ್ತಿನಲ್ಲೇ ಈ ಆರೋಪಗಳು ಕೇಳಿಬಂದಿವೆ.

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನದ ಹಿನ್ನೆಲೆ-ಮುನ್ನೆಲೆ ಏನು?

ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದು ಮಾಡಿತ್ತು. ನಂತರ, ಲಡಾಖ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದೆ.

ಕೇಂದ್ರ ಸರ್ಕಾರದ ಕ್ರಮವನ್ನು 2023ರ ಡಿಸೆಂಬರ್‌ನಲ್ಲಿ ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್‌, 'ಸರಿಯಾದ ಸಮಯದಲ್ಲಿ ರಾಜ್ಯ ಸ್ಥಾನಮಾನವನ್ನು ಪುನಃ ಸ್ಥಾಪಿಸಲಾಗುವುದು' ಎಂದು ಕೇಂದ್ರ ಸರ್ಕಾರ ನೀಡಿದ್ದ ಭರವಸೆಯನ್ನು ದಾಖಲಿಸಿಕೊಂಡಿತ್ತು.

ಬಳಿಕ 2024ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಎನ್‌ಸಿ, ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರ ರಚಿಸಿದೆ.

ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ಪುನಃಸ್ಥಾಪನೆಗಾಗಿನ ತನ್ನ ಹೋರಾಟವನ್ನು ಎನ್‌ಸಿ ಇತ್ತೀಚಿನ ದಿನಗಳಲ್ಲಿ ತೀವ್ರಗೊಳಿಸಿದೆ. ಜುಲೈ 20ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries