ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಅಷ್ಟಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ 29 ರಿಂದ ಸೆ. 26ರ ವರೆಗೆ ಶ್ರೀಮಠದಲ್ಲಿ ಜರಗಲಿದೆ.
ಒಟ್ಟು 60ದವಿಸಗಳ ಕಾಲ ನಡೆಯಲಿರುವ ಸಾಂಸ್ಕøತಿಕ ಉತ್ಸವದ ಉದ್ಘಾಟನೆ 29ರಂದು ಬೆಳಗ್ಗೆ 9ಕ್ಕೆ ಶ್ರೀ ಮಠದಲ್ಲಿ ಜರಗಲಿದೆ.
ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳ (ರಿ) ಸಂಯೋಜನೆ ಹಾಗೂ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ಬೆಂಗಳೂರು ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ ಎಡನೀರು ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯುವುದು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಕಾರ್ಯಕ್ರಮ ಉದ್ಘಾಟಿಸುವರು. ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನ ಪರಿಷತ್ ಉಪ ನಾಯಕ ಹಾಗೂ ಹುಬ್ಬಳ್ಳಿ ಶಾಸಕ ಅರವಿಂದ ಬೆಲ್ಲದ, ಉದುಮ ವಿಧಾನಸಭಾ ಕ್ಷೇತ್ರ ಶಾಸಕ ಕೆ. ನೀಲಕಂಠನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹೈದರಾಬಾದ್‍ನ ಉದ್ಯಮಿ ಕೃಷ್ಣಮೂರ್ತಿ ಮಂಜ, ಅನಿವಾಸಿ ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ಗೌರವ ಉಪಸ್ಥಿತರಿರುವರು. ಈ ಸಂದರ್ಭ ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆನೂರು ಅನಂತಕೃಷ್ಣ ಶರ್ಮಾ ಅವರನ್ನು ಸನ್ಮಾನಿಸಲಾಗುವುದು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ. ಶ್ಯಾಮ ಭಟ್ ಹಾಗೂ ಅಧ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ಪುತ್ತೂರು ಪಾಲ್ಗೊಳ್ಳುವರು.
ಸಂಜೆ 5ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿಶೇಷ ಜುಗಲ್‍ಬಂದಿ ನಡೆಯಲಿರುವುದು.
ನಾಡಜ್ಯೋತಿ ವಿದ್ವಾನ್ ಎಂ.ಕೆ. ಪ್ರಾಣೇಶ್ ಕೊಳಲು, ಪಂಡಿತ್ ಡಾ. ರವೀಂದ್ರ ಕಟೋಟಿ ಸಂವಾದಿನಿ ಹಾರ್ಮೋನಿಯಂ, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಮೃದಂಗ, ಹಾಗೂ ರೂಪೇಶ್ ಕಲ್ಲೂರ್ಕರ್ ತಬಲಾದಲ್ಲಿ ಸಹಕರಿಸುವರು.



