ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (DCGI), ಟಕೆಡಾ ಬಯೋಫಾರ್ಮಾಸ್ಯುಟಿಕಲ್ಸ್ ಇಂಡಿಯಾ ಸಂಸ್ಥೆಯ 'ಕ್ಯುಡೆಂಗಾ' (QDENGA) ಲಸಿಕೆಗೆ ಅನುಮೋದನೆ ನೀಡಿದೆ. ಹೊಸ ಔಷಧ ಹಾಗೂ ವೈದ್ಯಕೀಯ ಪ್ರಯೋಗಗಳ (NDCT) ನಿಯಮಗಳು 2019ರ ಅಡಿಯಲ್ಲಿ, 4 ರಿಂದ 60 ವರ್ಷ ವಯಸ್ಸಿನವರಲ್ಲಿ ಡೆಂಗ್ಯೂ ತಡೆಗಟ್ಟಲು ಈ ಲಸಿಕೆಯನ್ನು ಬಳಸಬಹುದಾಗಿದೆ.
ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಡೆಂಗ್ಯೂ ಲಸಿಕೆ ಇದಾಗಿದೆ. ಹಿಂದೆ ಡೆಂಗ್ಯೂ ಬಂದಿರಲಿ ಅಥವಾ ಬಾರದಿರಲಿ, ಯಾವುದೇ ಮುನ್ನೆಚ್ಚರಿಕೆ ತಪಾಸಣೆಯ ಅಗತ್ಯವಿಲ್ಲದೆ ಈ ಲಸಿಕೆಯನ್ನು ಯಾರು ಬೇಕಾದರೂ ಪಡೆಯಬಹುದು.
ದೇಶದಲ್ಲಿ ದೊಡ್ಡ ಸಾರ್ವಜನಿಕ ಆರೋಗ್ಯ ಸವಾಲಾಗಿ ಪರಿಣಮಿಸಿರುವ ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಈ ಅನುಮೋದನೆ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
ಸೊಳ್ಳೆಗಳಿಂದ ಹರಡುವ ಡೆಂಗ್ಯೂ ವೈರಸ್ ಜಾಗತಿಕವಾಗಿ ದೊಡ್ಡ ಭೀತಿ ಸೃಷ್ಟಿಸಿದ್ದು, ವಿಶ್ವದ 125ಕ್ಕೂ ಹೆಚ್ಚು ದೇಶಗಳಲ್ಲಿ ಈ ಕಾಯಿಲೆ ಹರಡಿದೆ.
ವಿಶ್ವದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ಭಾರತದಲ್ಲೇ ದಾಖಲಾಗುತ್ತಿವೆ. 2025ರಲ್ಲಿ ದೇಶದಲ್ಲಿ 1,13,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಆದರೆ, ವಾಸ್ತವದಲ್ಲಿ ಭಾರತದಲ್ಲಿ ಇದರ ತೀವ್ರತೆ ವರದಿಯಾಗಿರುವುದಕ್ಕಿಂತ ಹೆಚ್ಚಾಗಿದ್ದು, ಪ್ರತಿ ವರ್ಷ ಕೋಟ್ಯಂತರ ಜನರಿಗೆ ಈ ಸೋಂಕು ತಗುಲುತ್ತಿದೆ ಎಂದು ಸಂಶೋಧನಾ ವರದಿಗಳು ಅಂದಾಜಿಸಿವೆ.
►ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಡೆಂಗ್ಯೂ ಲಸಿಕೆ
ಕ್ಯುಡೆಂಗಾ ನಾಲ್ಕೂ ವಿಧದ ಡೆಂಗ್ಯೂ ವೈರಸ್‌ಗಳ ವಿರುದ್ಧ ರಕ್ಷಣೆ ನೀಡುವ ಲೈವ್-ಅಟೆನ್ಯೂಯೇಟೆಡ್ ಲಸಿಕೆಯಾಗಿದೆ. 0.5 ಎಂಎಲ್‌ನ ಈ ಲಸಿಕೆಯನ್ನು ಮೂರು ತಿಂಗಳ ಅಂತರದಲ್ಲಿ ಎರಡು ಡೋಸ್‌ಗಳಾಗಿ ಚರ್ಮದ ಕೆಳಗೆ (ಸಬ್ಕ್ಯುಟೇನಿಯಸ್) ನೀಡಲಾಗುತ್ತದೆ.
ಡೆಂಗ್ಯೂ ಹೆಚ್ಚಾಗಿರುವ ಪ್ರದೇಶಗಳಲ್ಲಿ ಲಸಿಕೆ ಮುನ್ನೆಚ್ಚರಿಕೆ ತಪಾಸಣೆ ಇಲ್ಲದೆ ಸಾರ್ವಜನಿಕ ಲಸಿಕಾ ಕಾರ್ಯಕ್ರಮಗಳ ಮೂಲಕ ಇದನ್ನು ನೀಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಈ ಲಸಿಕೆಗೆ ಡಬ್ಲ್ಯುಎಚ್‌ಒ ಮುನ್ನರ್ಹತೆ ನೀಡಿದ್ದು, ಜಾಗತಿಕ ಗುಣಮಟ್ಟ, ಸುರಕ್ಷತೆ ಮತ್ತು ದಕ್ಷತೆಯನ್ನು ಇದು ಖಚಿತಪಡಿಸಿದೆ. ಇದರಿಂದಾಗಿ ಯುನಿಸೆಫ್ ಮತ್ತು ಪಾಹೋ (PAHO) ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕ ಈ ಲಸಿಕೆಯನ್ನು ಸುಲಭವಾಗಿ ಖರೀದಿಸಲು ಹಾದಿ ಸುಗಮವಾಗಿದೆ.
ಭಾರತ ಸೇರಿದಂತೆ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಯುರೋಪ್‌ನ ಒಟ್ಟು 43 ದೇಶಗಳಲ್ಲಿ ಕ್ಯುಡೆಂಗಾ ಲಸಿಕೆಗೆ ಅನುಮೋದನೆ ಸಿಕ್ಕಿದೆ. ಜಾಗತಿಕವಾಗಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಮೂಲಕ 3.2 ಕೋಟಿಗೂ ಹೆಚ್ಚು ಡೋಸ್‌ಗಳನ್ನು ವಿತರಿಸಲಾಗಿದೆ. ಬ್ರೆಝಿಲ್‌ನ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಇದನ್ನು ಸೇರಿಸಲಾಗಿದ್ದು, ಅರ್ಜೆಂಟೀನಾ, ಕೊಲಂಬಿಯಾ ಮತ್ತು ಇಂಡೋನೇಷ್ಯಾದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲೂ ಇದು ಲಭ್ಯವಿದೆ.
ʼಇಂಡಿಯಾ ಟುಡೇʼ ಜತೆ ಮಾತನಾಡಿದ ಇಂಟರ್‌ಕಾಂಟಿನೆಂಟಲ್ ಮಾರ್ಕೆಟ್ಸ್ ಮುಖ್ಯಸ್ಥ ಡಾ. ಮಹೇಂದರ್ ನಾಯಕ್, "ಕ್ಯುಡೆಂಗಾ ಲಸಿಕೆಯ ಏಳು ವರ್ಷಗಳ ಇತ್ತೀಚಿನ ವರದಿಯು, ಇದು ನಾಲ್ಕೂ ವಿಧದ ಡೆಂಗ್ಯೂ ಸೋಂಕು ಮತ್ತು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯ ವಿರುದ್ಧ ನಿರಂತರ ರಕ್ಷಣೆ ನೀಡುತ್ತದೆ ಎಂಬುದನ್ನು ತೋರಿಸಿದೆ. 2022ರಲ್ಲಿ ಬಿಡುಗಡೆಯಾದಾಗಿನಿಂದ ಈವರೆಗೆ 43 ದೇಶಗಳಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ. ಭಾರತದಲ್ಲಿ ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಪ್ರಮುಖ ಹೆಜ್ಜೆಯಾಗಿದೆ" ಎಂದಿದ್ದಾರೆ.
►ಡೆಂಗ್ಯೂ ತಡೆಗಟ್ಟುವಲ್ಲಿ ಹೊಸ ಯುಗ
ವೇಗದ ನಗರೀಕರಣ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸೊಳ್ಳೆಗಳ ಕಾಟ ಹೆಚ್ಚುತ್ತಿದ್ದು, ಪ್ರತಿ ವರ್ಷ ಕೋಟ್ಯಂತರ ಭಾರತೀಯರು ಡೆಂಗ್ಯೂ ಭೀತಿಯಲ್ಲಿದ್ದಾರೆ. ಇದರಿಂದಾಗಿ ಡೆಂಗ್ಯೂ ವರ್ಷಪೂರ್ತಿ ಕಾಡುವ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಆರೋಗ್ಯ ವ್ಯವಸ್ಥೆಯ ಮೇಲೆಯೂ ಒತ್ತಡ ಹೇರುತ್ತಿದೆ.
ಡೆಂಗ್ಯೂ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ ಇದನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಇದು ತೀವ್ರಗೊಂಡರೆ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು ಮತ್ತು ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಸೌತ್ ಈಸ್ಟ್ ಏಷ್ಯಾ ಮತ್ತು ಇಂಡಿಯಾ ಕ್ಲಸ್ಟರ್‌ನ ಜನರಲ್ ಮ್ಯಾನೇಜರ್ ಪೀಟರ್ ಸ್ಟ್ರೈಬಲ್ ಮಾತನಾಡಿ, "ಡೆಂಗ್ಯೂ ಇಡೀ ವಲಯದ ಜಂಟಿ ಸವಾಲಾಗಿದೆ. ಕ್ಯುಡೆಂಗಾ ಲಸಿಕೆಯನ್ನು ಜನರಿಗೆ ತಲುಪಿಸುವುದಷ್ಟೇ ಅಲ್ಲದೆ, ರೋಗದ ಮೇಲ್ವಿಚಾರಣೆ, ಜಾಗೃತಿ, ಸೊಳ್ಳೆಗಳ ನಿಯಂತ್ರಣ ಮತ್ತು ಸಮುದಾಯಗಳ ಭಾಗವಹಿಸುವಿಕೆಯನ್ನು ಬಲಪಡಿಸಲು ಸರ್ಕಾರಗಳು ಹಾಗೂ ಆರೋಗ್ಯ ಸಂಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಮ್ಮ ಸಂಸ್ಥೆ ಬದ್ಧವಾಗಿದೆ" ಎಂದಿದ್ದಾರೆ.
ಭಾರತದಲ್ಲಿ ಡೆಂಗ್ಯೂ ತೀವ್ರತೆ ಹೆಚ್ಚಾಗಿದ್ದು, ದೇಶದ ಹಲವು ಭಾಗಗಳಲ್ಲಿ ನಾಲ್ಕೂ ವಿಧದ ಡೆಂಗ್ಯೂ ವೈರಸ್‌ಗಳು ಒಟ್ಟಿಗೆ ಹರಡುತ್ತಿವೆ ಎಂದು ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥ ಡಾ. ಗೋ ಚೂ ಬೆಂಗ್ ತಿಳಿಸಿದ್ದಾರೆ. ಕ್ಯುಡೆಂಗಾ ಲಸಿಕೆಯನ್ನು ಹಿಂದೆ ಡೆಂಗ್ಯೂ ಬಂದಿರಲಿ ಅಥವಾ ಬಾರದಿರಲಿ, ನಾಲ್ಕೂ ವಿಧದ ವೈರಸ್‌ಗಳ ವಿರುದ್ಧ ರಕ್ಷಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
►ಕ್ಲಿನಿಕಲ್ ಪ್ರಯೋಗಗಳ ಆಧಾರದ ಮೇಲೆ ಕ್ಯುಡೆಂಗಾಗೆ ಅನುಮೋದನೆ
ಟಕೆಡಾ ಸಂಸ್ಥೆಯ ಜಾಗತಿಕ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳ ಆಧಾರದ ಮೇಲೆ ಭಾರತದಲ್ಲಿ ಈ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಡೆಂಗ್ಯೂ ಇರುವ ಮತ್ತು ಇಲ್ಲದ ಪ್ರದೇಶಗಳ ಒಟ್ಟು 28,000ಕ್ಕೂ ಹೆಚ್ಚು ಜನರು 1, 2 ಮತ್ತು 3ನೇ ಹಂತದ 19 ಕ್ಲಿನಿಕಲ್ ಪ್ರಯೋಗಗಳಲ್ಲಿ ಭಾಗವಹಿಸಿದ್ದರು. ಲಸಿಕೆಯ ದೀರ್ಘಾವಧಿಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಎಂಟು ದೇಶಗಳ 20,000ಕ್ಕೂ ಹೆಚ್ಚು ಜನರ ಮೇಲೆ ಸುದೀರ್ಘ ಕಾಲ ನಡೆಸಲಾದ 'ಮೂರನೇ ಹಂತದ ಟೈಡ್ಸ್' (Phase III TIDES - DEN-301) ಪ್ರಯೋಗದ ವರದಿಯೂ ಇದರಲ್ಲಿ ಸೇರಿದೆ.
ಲಸಿಕೆಯ ಎರಡನೇ ಡೋಸ್ ಪಡೆದ 12 ತಿಂಗಳ ನಂತರ, ಡೆಂಗ್ಯೂ (ವಿರೋಲಾಜಿಕಲಿ ಕನ್ಫರ್ಮ್ಡ್ ಡೆಂಗ್ಯೂ) ವಿರುದ್ಧ ಈ ಲಸಿಕೆಯು ಶೇ. 80.2ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ದೃಢಪಟ್ಟಿದೆ. 18 ತಿಂಗಳ ಬಳಿಕ, ಡೆಂಗ್ಯೂನಿಂದಾಗಿ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವಲ್ಲಿ ಈ ಲಸಿಕೆಯು ಶೇ. 90.4ರಷ್ಟು ಯಶಸ್ವಿಯಾಗಿದೆ ಎಂದು ಅಧ್ಯಯನವು ತೋರಿಸಿದೆ.
ನಾಲ್ಕೂವರೆ ವರ್ಷಗಳ ನಂತರವೂ, ಕ್ಯುಡೆಂಗಾ ಲಸಿಕೆಯ ಎರಡು ಡೋಸ್‌ಗಳು ಡೆಂಗ್ಯೂನಿಂದ ಆಸ್ಪತ್ರೆಗೆ ದಾಖಲಾಗುವುದನ್ನು ಶೇ. 84.1ರಷ್ಟು ತಡೆಗಟ್ಟಿವೆ. ವಿಶೇಷವೆಂದರೆ, ನಾಲ್ಕೂ ವಿಧದ ಡೆಂಗ್ಯೂ ವೈರಸ್‌ಗಳ ವಿರುದ್ಧ ಈ ಲಸಿಕೆ ಸತತ ಏಳು ವರ್ಷಗಳವರೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದೆ.
ಭಾರತೀಯರ ಮೇಲೆ ನಡೆಸಲಾದ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ (DEN-302) ವರದಿಗಳು ಕೂಡ ಈ ಲಸಿಕೆಯ ಅನುಮೋದನೆಗೆ ಕಾರಣವಾಗಿವೆ. 4 ರಿಂದ 60 ವರ್ಷದೊಳಗಿನವರಲ್ಲಿ ಈ ಲಸಿಕೆಯ ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿಯನ್ನು ಇದು ಮೌಲ್ಯಮಾಪನ ಮಾಡಿದೆ. ಆರೋಗ್ಯವಂತ ವಯಸ್ಕರು, ಹದಿಹರೆಯದವರು ಮತ್ತು ಮಕ್ಕಳಲ್ಲಿ ಕ್ಯುಡೆಂಗಾ ಲಸಿಕೆಯು ಅತ್ಯಂತ ಸುರಕ್ಷಿತ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ಎಂಬುದನ್ನು ಈ ಅಧ್ಯಯನವು ಸ್ಪಷ್ಟಪಡಿಸಿದೆ.
ವಾಸ್ತವ ಜಗತ್ತಿನ ಪುರಾವೆಗಳು ಮತ್ತು ನಿರಂತರ ಫಾರ್ಮಾ-ಕೋವಿಜಿಲೆನ್ಸ್ (ಔಷಧಗಳ ಸುರಕ್ಷತಾ ನಿಗಾ) ಮೂಲಕ ಲಸಿಕೆಯ ಸುರಕ್ಷತೆ ಹಾಗೂ ಪರಿಣಾಮಗಳ ಕುರಿತು ಇನ್ನಷ್ಟು ಖಚಿತ ಮಾಹಿತಿ ಲಭ್ಯವಾಗಿದೆ.
ಡಿಸಿಜಿಐ ಅನುಮೋದನೆಯ ನಂತರ, ಭಾರತದಲ್ಲಿ ಕ್ಯುಡೆಂಗಾ ಲಸಿಕೆಯ ಯೋಜನೆ, ವಿತರಣೆ ಮತ್ತು ಲಭ್ಯತೆಗಾಗಿ ಟಕೆಡಾ ಸಂಸ್ಥೆಯು ಭಾರತೀಯ ನಿಯಂತ್ರಣ ಪ್ರಾಧಿಕಾರಗಳು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಕೀಯ ಸೇವಾದಾರರೊಂದಿಗೆ ನಿರಂತರವಾಗಿ ಕೈಜೋಡಿಸಿ ಕೆಲಸ ಮಾಡಲಿದೆ.

