ವಾಷಿಂಗ್ಟನ್: ರಷ್ಯಾದ ರಕ್ಷಣಾ-ಕೈಗಾರಿಕಾ ವಲಯಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಪೂರೈಸಿದ ಆರೋಪದ ಮೇಲೆ ಹೇರಲಾಗಿದ್ದ ನಿರ್ಬಂಧಗಳ ಪಟ್ಟಿಯಿಂದ ನಾಲ್ಕು ಭಾರತೀಯ ಕಂಪನಿಗಳನ್ನು ಅಮೆರಿಕ ಕೈಬಿಟ್ಟಿದೆ.
ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿಗಳ ನಿಯಂತ್ರಣ ಕಚೇರಿಯು (ಒಎಫ್ಎಸಿ) ಎಸ್ಡಿಎನ್ ಪಟ್ಟಿಯಿಂದ ಈ ನಾಲ್ಕು ಕಂಪನಿಗಳನ್ನು ತೆರವುಗೊಳಿಸಿದೆ.
ಯಾವ ಕಂಪನಿಗಳು?
ಹೈದರಾಬಾದ್ ಮೂಲದ ಆರ್ಆರ್ಜಿ ಎಂಜಿನಿಯರಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲೋಕೇಶ್ ಮೆಷಿನ್ಸ್ ಲಿಮಿಟೆಡ್, ಅಹಮದಾಬಾದ್ ಮೂಲದ ಗ್ಯಾಲಕ್ಸಿ ಬೇರಿಂಗ್ಸ್ ಮತ್ತು ನವದೆಹಲಿ ಮೂಲದ ಶೌರ್ಯ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸೇರಿವೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.
ಆರೋಪ ಏನಾಗಿತ್ತು?
ಗ್ಯಾಲಕ್ಸಿ ಬೇರಿಂಗ್ಸ್ ಲಿಮಿಟೆಡ್: ರಷ್ಯಾದ ಸಂಸ್ಥೆಗಳಿಗೆ ರೋಲರ್ ಬೇರಿಂಗ್ ಸೇರಿದಂತೆ ಗರಿಷ್ಠ ಉಪಯುಕ್ತ ಉಪಕರಣಗಳನ್ನು ರಫ್ತು ಮಾಡಿದ ಆರೋಪದ ಮೇಲೆ 2024ರ ಅಕ್ಟೋಬರ್ನಲ್ಲಿ ಈ ಕಂಪನಿಯ ಮೇಲೆ ನಿರ್ಬಂಧ ಹೇರಲಾಗಿತ್ತು.
ಶೌರ್ಯ ಏರೋನಾಟಿಕ್ಸ್: ರಷ್ಯಾಕ್ಕೆ ರೇಡಾರ್ ಉಪಕರಣಗಳು, ರೇಡಿಯೊ ನ್ಯಾವಿಗೇಷನ್ ಮತ್ತು ರೇಡಿಯೊ ರಿಮೋಟ್ ಕಂಟ್ರೋಲ್ ಉಪಕರಣಗಳನ್ನು ಕಳುಹಿಸಿದ ಆರೋಪ ಎದುರಿಸಿತ್ತು.
ಆರ್ಆರ್ಜಿ ಎಂಜಿನಿಯರಿಂಗ್: ಅಮೆರಿಕದ ಕಪ್ಪುಪಟ್ಟಿಯಲ್ಲಿದ್ದ ರಷ್ಯಾದ 'ಆರ್ಟೆಕ್ಸ್ ಲಿಮಿಟೆಡ್' ಕಂಪನಿಗೆ 100ಕ್ಕೂ ಹೆಚ್ಚು ಮೈಕ್ರೋಎಲೆಕ್ಟ್ರಾನಿಕ್ಸ್ ಶಿಪ್ಮೆಂಟ್ಗಳನ್ನು ರವಾನಿಸಿದ ಆರೋಪ ಇತ್ತು.
ಲೋಕೇಶ್ ಮೆಷಿನ್ಸ್: ರಷ್ಯಾದ ವಿವಿಧ ಉತ್ಪಾದನಾ ಕಂಪನಿಗಳಿಗೆ ಯಂತ್ರೋಪಕರಣಗಳನ್ನು ಪೂರೈಸಿದ ಆರೋಪ ಹೊರಿಸಲಾಗಿತ್ತು.

