ಢಾಕಾ: ಬಾಂಗ್ಲಾದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಹಾಗೂ ಭೂಕುಸಿತದ ಘಟನೆಗಳಲ್ಲಿ ಒಂದು ವಾರದಲ್ಲಿ 44 ಮಂದಿ ಮೃತಪಟ್ಟಿದ್ದಾರೆ. ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, 2.5 ಲಕ್ಷ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 12 ಗಂಟೆಯಿಂದ ಭಾನುವಾರ ಮುಂಜಾನೆ 6 ಗಂಟೆವರೆಗೆ 76 ಮಿ.ಮೀ. ಮಳೆ ಸುರಿದಿದೆ. ಇದರಿಂದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಾಜಧಾನಿ ಢಾಕಾದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ತೀವ್ರ ಹಾನಿಗೊಳಗಾದ 7 ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯ ಮೂರೂ ಪಡೆಗಳ ಸಿಬ್ಬಂದಿಯನ್ನು ಸರ್ಕಾರವು ನಿಯೋಜಿಸಿದೆ. ಇದರೊಂದಿಗೆ ಸ್ಥಳೀಯ ಸಂಸ್ಥೆಗಳೂ ಕಾರ್ಯನಿರ್ವಹಿಸುತ್ತಿವೆ.
'ಜುಲೈ 5ರಿಂದ ಶನಿವಾರ ಸಂಜೆವರೆಗೆ ನಡೆದ ವಿವಿಧ ಅವಢಗಳಲ್ಲಿ 44 ಮಂದಿ ಸಾವಿಗೀಡಾಗಿದ್ದಾರೆ. ದೇಶದಾದ್ಯಂತ ಒಟ್ಟು 2.67 ಲಕ್ಷ ಕುಟುಂಬಗಳು ಬಾಧಿತವಾಗಿವೆ' ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಮುಂದಿನ 24-48 ಗಂಟೆಗಳಲ್ಲಿ ಬಾಂಗ್ಲಾದೇಶದ ಸಿಲೆಟ್, ರಂಗಪುರ ಹಾಗೂ ಮೈಮೆನ್‌ಶಿಂಘೋ ಪ್ರದೇಶಗಳು ಸೇರಿದಂತೆ ಭಾರತದ ಮೇಘಾಲಯ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಭಾರಿ ಮಳೆ ಸುರಿಯಲಿದೆ ಎಂದು ಅಲ್ಲಿನ ಪ್ರವಾಹ ಮುನ್ಸೂಚನೆ ಕೇಂದ್ರ ತಿಳಿಸಿದೆ.

