ಲಕ್ನೊ: ರಾಮಮಂದಿರ ನಿರ್ಮಾಣವನ್ನು ವಿರೋಧಿಸಿದ್ದವರೇ ಇಂದು ನಂಬಿಕೆಯ ಕುರಿತು ಮಾತನಾಡುತ್ತಿರುವುದು ನಗೆಪಾಟಲಿನ ಸಂಗತಿಯಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸಮಾಜವಾದಿ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು.
ಗೋರಖ್‌ಪುರದಲ್ಲಿರುವ ತಮ್ಮ ಸ್ವಕ್ಷೇತ್ರದಲ್ಲಿ 995 ಕೋಟಿ ರೂ. ಮೌಲ್ಯದ 14 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಅವಧಿಯಲ್ಲಿನ ನಂಬಿಕೆ ಕುರಿತ ನಿಲುವು, ಕಾನೂನು ಮತ್ತು ಸುವ್ಯವಸ್ಥೆ, ಹೂಡಿಕೆ ಹಾಗೂ ಉದ್ಯೋಗ ನೇಮಕಾತಿ ವಿಷಯಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
2017ಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ನಿರುದ್ಯೋಗ ಹೆಚ್ಚಾಗಿತ್ತು. ಬಂಡವಾಳ ಹೂಡಿಕೆಗೆ ಹಿಂಜರಿಕೆ ಉಂಟಾಗಿತ್ತು. ಸಕ್ಕರೆ ಕಾರ್ಖಾನೆಗಳು ಮುಚ್ಚಿಹೋಗಿದ್ದವು ಎಂದು ಅವರು ಆರೋಪಿಸಿದರು.
"2017ಕ್ಕೂ ಮುನ್ನ ಗಲಭೆಗಳು ಸಾಮಾನ್ಯವಾಗಿದ್ದವು. ಅರಾಜಕತೆ ತುತ್ತತುದಿಯಲ್ಲಿತ್ತು. ಹೋಳಿ, ವಿಜಯದಶಮಿ, ದುರ್ಗಾ ಪೂಜೆ ಹಾಗೂ ರಾಮ ನವಮಿ ಹಬ್ಬಗಳ ಸಂದರ್ಭದಲ್ಲಿ ಗಲಭೆಗಳು ಹೇಗೆ ಸ್ಫೋಟಗೊಳ್ಳುತ್ತಿದ್ದವು ಎಂಬುದನ್ನು ನೆನಪಿಸಿಕೊಳ್ಳಿ. ಜನ್ಮಾಷ್ಟಮಿ ಆಚರಣೆ ಹಾಗೂ ಕನ್ವರ್ ಯಾತ್ರೆ ನಡೆಯಲು ಕೂಡ ಅವಕಾಶ ನೀಡುತ್ತಿರಲಿಲ್ಲ" ಎಂದು ಅವರು ಹೇಳಿದರು.
"ಒಟ್ಟಾರೆಯಾಗಿ, ಈ ಹಿಂದೆ ನಂಬಿಕೆಗಳ ಮೇಲೆ ದಾಳಿ ನಡೆಸುತ್ತಿದ್ದವರೇ ಇಂದು ತಮ್ಮನ್ನು ನಂಬಿಕೆಯ ವಕ್ತಾರರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ" ಎಂದು ಅವರು ಛೇಡಿಸಿದರು.
"ರಾಮಜನ್ಮಭೂಮಿ ದೇವಾಲಯ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಿದ್ದರೋ, ರಾಮಜನ್ಮಭೂಮಿ ಚಳವಳಿಯ ವೇಳೆ ಶ್ರೀರಾಮನ ಭಕ್ತರ ಮೇಲೆ ಯಾರು ಗುಂಡು ಹಾರಿಸಿದ್ದರೋ, ದೇವಾಲಯ ನಿರ್ಮಾಣವನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಯಾರು ವಕೀಲರನ್ನು ನೇಮಿಸಿದ್ದರೋ, ಅವರೇ ಇಂದು ನಂಬಿಕೆಯ ಕುರಿತು ಮಾತನಾಡುತ್ತಿದ್ದಾರೆ" ಎಂದು ಆದಿತ್ಯನಾಥ್ ವ್ಯಂಗ್ಯವಾಡಿದರು.

